ಹೇಮಾವತಿ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ

31krp-01
ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Published on

ಕೆ.ಆರ್.ಪೇಟೆ: ತಾಲೂಕಿನ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೇಮಾವತಿ ಮುಖ್ಯ ನಾಲೆಗೆ ಸುಮಾರು ಒಂದೂವರೆ ತಿಂಗಳು ನೀರು ಹರಿಸಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ, ಕಟ್ಟೆಗಳಿಗೆ ಹನಿ ನೀರನ್ನು ಬಿಡದೆ ನಿರ್ಲಕ್ಷ್ಯ ವಹಿಸಿದರು. ಈ ಕಾರಣ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಯಿತು. ಈಗ ಮತ್ತೆ 10 ದಿನಗಳ ಮಟ್ಟಿಗೆ ಮತ್ತೊಮ್ಮೆ ಮುಖ್ಯ ನಾಲೆಗೆ ನೀರು ಹರಿಸಲಾಗುತ್ತಿದೆ. ಆದರೂ ನೀರಾವರಿ ಅಧಿಕಾರಿಗಳು ಇದುವರೆವಿಗೂ ನೀರು ತುಂಬಿಸಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಎರಡನೇ ಬಾರಿಗೂ ನಮಗೆ ಅನ್ಯಾಯ ಮಾಡುತ್ತಿರುವ ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಲು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು. ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಿ ನಮ್ಮ ಗ್ರಾಮದ ಕೆರೆಗಳಿಗೆ ನೀರು ತುಂಬಿಸದೆ ಇರಲು ಕಾರಣವೇನು ಎಂದು ರೈತರು ಪ್ರಶ್ನಿಸಿದರು.

ಕೊನೆಯ ಭಾಗದ ಗ್ರಾಮಗಳಾದ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ಕೆರೆಗಳಿಗೆ ಭಾರತೀಪುರ ಬಳಿ ಇರುವ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವಿ ಆಲಿಸಿದ ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೇಶ್, ಕಾಂಗ್ರೆಸ್ ಮುಖಂಡ ಡಾ.ಕೆ.ಸಿ.ಶ್ರೀಕಾಂತ್, ಈ ಭಾಗದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಏನು ತೊಂದರೆ ಇದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಯಪಾಲಕ ಇಂಜಿನಿಯರ್ ಕಿಜರ್ ಅಹಮದ್, ನಂ.55 ವಿತರಣಾ ನಾಲೆಯ ಮೂಲಕ ನಾಲೆಯ ಸಾಮರ್ಥ್ಯಕ್ಕೆ ತಕ್ಕಂತೆ ನೀರನ್ನು ಹರಿಸಲಾಗುತ್ತಿದೆ. ಈ ಭಾಗದ ಎಲ್ಲ ದೊಡ್ಡ ದೊಡ್ಡ ಕೆರೆಗಳನ್ನು ತುಂಬಿಸಲಾಗಿದೆ. ನಂ.55ರ ಕೊನೆಯ ಭಾಗದ ಗ್ರಾಮಗಳ ಕೆರೆಗಳಿಗೆ ಈ ಬಾರಿ ತುಂಬಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net