

ಗುರುಪುರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಬೀಡಿ ಕಾರ್ಮಿಕರ ಆರು ವರ್ಷಗಳ(2018-2024) ಕನಿಷ್ಠ ಕೂಲಿ ಹಾಗೂ 2024ರಿಂದ ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆ ಪಾವತಿಸುವಂತೆ ಆಗ್ರಹಿಸಿ ಬೀಡಿ ಕಾರ್ಮಿಕರು ಗುರುವಾರ ಗುರುಪುರ ಕೈಕಂಬದಲ್ಲಿ ಬೀಡಿ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ-ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘದ 500ಕ್ಕೂ ಹೆಚ್ಚು ಬೀಡಿ ಕಾರ್ಮಿಕರು ಹಕ್ಕೊತ್ತಾಯ ಚಳವಳಿ ಮತ್ತು ಬೀಡಿ ಡಿಪೋಗೆ 3 ತಾಸು ಮುತ್ತಿಗೆ ಹಾಕಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಮಿಕ ಸಂಘಟನೆಯ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, 2018ರಲ್ಲಿ ತ್ರಿಪಕ್ಷೀಯ ಮಾತುಕತೆಯ ಮೂಲಕ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ 40 ರೂ. ನಿಗದಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಮಾಲೀಕರು ಈ ಆದೇಶ ಜಾರಿಗೊಳಿಸದೆ ಬೀಡಿ ಕಾರ್ಮಿಕರಿಗೆ ವಂಚಿಸಿದ್ದಾರೆ. 2024ರಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಲೀಕರ ಪರ ಹಿಂದಿನ ಆದೇಶ ರದ್ದುಗೊಳಿಸಿ, 14 ರೂ. ಕನಿಷ್ಠ ಕೂಲಿ ನಿಗದಿಪಡಿಸಿ ಏಕಪಕ್ಷೀಯ ಆದೇಶ ಹೊರಡಿಸಲು ಕಾರಣರಾದರು. ಈ ರೀತಿ ಆದೇಶ ಹಿಮ್ಮುಖಗೊಳಿಸಲಾದ ಉದಾಹರಣೆಗಳೇ ಇಲ್ಲದಿದ್ದರೂ ಪ್ರಸಕ್ತ ಆದೇಶ ಜಾರಿಗೊಳಿಸುವಲ್ಲಿ ಬೀಡಿ ಮಾಲೀಕರು ಮೀನಮೇಷ ಎಣಿಸುತ್ತಿದ್ದು, ಕನಿಷ್ಠ ಕೂಲಿ ಜಾರಿಯವರೆಗೆ ಕಾರ್ಮಿಕ ಸಂಘಟನೆಗಳು ಹೋರಾಟ ಮುಂದುವರಿಸಲಿವೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಉದ್ದೇಶಿಸಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ವಸಂತ ಆಚಾರಿ, ಬಿ.ಶೇಖರ್, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು. ಸ್ಥಳೀಯ ಬೀಡಿ ಮಜೂರರ ಸಂಘದ ಪದಾಧಿಕಾರಿಗಳಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋದಾ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮಾ ಕುಪ್ಪೆಪದವು, ವಾರಿಜಾ ಕುಪ್ಪೆಪದವು, ಅಶೋಕ ವಾಮಂಜೂರು ಮತ್ತಿತರರು ಇದ್ದರು. ನೋಣಯ್ಯ ಗೌಡ ಸ್ವಾಗತಿಸಿದರು. ವಸಂತಿ ಕುಪ್ಪೆಪದವು ವಂದಿಸಿದರು.