ಕೊಡಗಲ್ಲಿದು ಒಂದು ಮೊಟ್ಟೆಯ ವ್ಯಥೆ: ಸಿದ್ದರಾಮಯ್ಯ ಪ್ರಕರಣದ ಸೈಡ್ ಇಫೆಕ್ಟ್; ರಾಜಾ ಸೀಟೇ ಖಾಲಿ...

Egg
Published on

ಕೊಡಗು: ಒಂದು ಮೊಟ್ಟೆಯ ಕಥೆಯಲ್ಲ ಇದು, ಒಂದು ಮೊಟ್ಟೆಯ ವ್ಯಥೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮೊಟ್ಟೆ ಎಸೆದ ಪ್ರಕರಣ ರಾಜಕೀಯವಾಗಿ ಏನೇನೆಲ್ಲ ತಿರುವ ಪಡೆದಿರುವುದು ಒಂದೆಡೆಯಾದರೆ, ಇದರ ಅಡ್ಡಪರಿಣಾಮ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಮೇಲೆ ಹೊಡೆತ ಕೊಟ್ಟಿದೆ.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣದಿಂದ ಉಂಟಾದ ಪ್ರಕ್ಷುಬ್ಧ ಸ್ಥಿತಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ನಿಷೇಧಾಜ್ಞೆಯ ಪರಿಣಾಮವಾಗಿ ಕೊಡಗಿಗೆ ಪ್ರವಾಸಿಗರು ಬರದಂತಾಗಿದೆ. ನಿನ್ನೆ ಸಂಜೆಯೇ ನಿಷೇಧಾಜ್ಞೆ ತೆರವುಗೊಂಡಿದ್ದರೂ ನಾಲ್ಕು ದಿನಗಳ ನಿಷೇಧಾಜ್ಞೆಯಿಂದಾಗಿ ಕೊಡಗು ಜಿಲ್ಲೆಗೆ ಆಗಮಿಸಲು ಪ್ರವಾಸಿಗರು ಹಿಂಜರಿಯುತ್ತಿದ್ದಾರೆ.

ಹೀಗಾಗಿ ಪ್ರವಾಸಿಗ ಹಾಟ್​ಸ್ಪಾಟ್ ಎನಿಸಿಕೊಂಡಿರುವಂಥ ಮಡಿಕೇರಿಯ ರಾಜಾಸೀಟ್ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ರಾಜಾಸೀಟಲ್ಲಿ ರಜಾದಿನಗಳಂದು ಕಿಕ್ಕಿರಿದ ಜನಜಂಗುಳಿ ಇರುತ್ತದೆ. ಆದರೆ ಇಂದು ಪ್ರವಾಸಿಗರ ಸಂಖೆ ತೀರಾ ವಿರಳವಾಗಿದೆ. ಜಿಲ್ಲೆಯ ಇತರ ಪ್ರೇಕ್ಷಣೀಯ ಸ್ಥಳಗಳಲ್ಲೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ಇನ್ನು ಕೆಲವು ಹೋಮ್​ಸ್ಟೇಗಳ ಬುಕಿಂಗ್ ಕೂಡ ರದ್ದಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒಂದು ಮೊಟ್ಟೆಯ ಪ್ರಕರಣದಿಂದಾಗಿ ಭಾರಿ ಹೊಡೆತ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net