

ಮಧುಗಿರಿ: ಚುನಾವಣೆ ಬರ್ತಿದೆಯೆಲ್ಲಾ ಅದಕ್ಕೆ ಭಾರತ ಎಂದು ಮರುನಾಮಕರಣ ಮಾಡುವಂತಹ ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನವನ್ನು 26 ನೇ ನವೆಂಬರ್ 1949 ರಂದು ಅಂಗೀಕರಿಸಲಾಗಿದೆ. ಅಂದಿನಿಂದ ಭಾರತವನ್ನು ಇಂಡಿಯಾ ಎಂದೇ ಕರೆಯಲಾಗಿದೆ. ಈಗ ಬದಲಾವಣೆ ಮಾಡುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಸಂವಿಧಾನದ ಪೀಠಿಕೆಯಲ್ಲಿಯೂ ಭಾರತದ ಪ್ರಜೆಗಳಾದ ನಾವು ಎಂದೇ ಹೇಳಿದ್ದೇವೆ ಈಗ ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಗೃಹ ಸಚಿವ ಡಾ: ಜಿ.ಪರಮೇಶ್ವರ ಅವರು ಹಿಂದೂ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯಾವುದೇ ಧರ್ಮದಲ್ಲಿ ತಾರತಮ್ಯ ಮಾಡುವುದಿಲ್ಲ. ಹಿಂದೂ, ಇಸ್ಲಾಮ್, ಕ್ರೈಸ್ತ, ಸಿಖ್, ಭೌದ್ಧ,ಧರ್ಮದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಎಂದರು.