ಕಾಯಕದಿಂದ ಮಾತ್ರ ಹಣೆಬರಹ ಬದಲು

vrl (2)
ಸಿದ್ದನಕೊಳ್ಳದ ಸಿದಶ್ರೀ ಉತ್ಸವದ ಎರಡನೇ ದಿನವಾದ ಭಾನುವಾರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಜ್ಯೋತಿ ಬೆಳೆಗಿಸಿ ಚಾಲನೆ ನೀಡಿದರು. ಶ್ರೀಮಠದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ, ಡಾ.ಆರ್.ಎಸ್.ರಾಜು, ಮಲ್ಲಿಕಾರ್ಜುನ ಚರಂತಿಮಠ, ಘನಶಾಮ ಭಾಂಡಗೆ ಇದ್ದರು.
Published on

ಬಾಗಲಕೋಟೆ: ಕಾಯಕದ ಮೇಲೆ ಶ್ರದ್ಧೆ ಹಾಗೂ ಭರವಸೆ ಇದ್ದರೆ ನಿಮ್ಮ ಕೈ ಸಾವಿರ ಜನಕ್ಕೆ ಅನ್ನ ಹಾಕುವ ಸಾಮರ್ಥ್ಯ ಪಡೆಯುತ್ತದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
ಜಿಲ್ಲೆಯ ಇಳಕಲ್ಲ ತಾಲೂಕಿನ ಸಿದ್ದನಕೊಳ್ಳದಲ್ಲಿ ಭಾನುವಾರ ರಾತ್ರಿ ನಡೆದ ಶ್ರೀಸಿದ್ಧಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದರು.
ಸಂಕ್ರಾಂತಿ ಬಳಿಕ ಜಾತ್ರೆಗಳ ಸೀಸನ್ ಶುರುವಾಗುತ್ತದೆ. ಹಾಗೆಯೇ ವಿಧಾನಸಭೆ, ಲೋಕಸಭೆ ಚುನಾವಣೆಗಳು ಬಂದಾಗಿ ಸಾಕಷ್ಟು ಹೋರಾಟಗಳು ನಡೆಯುತ್ತವೆ. ಮೀಸಲಾತಿ ಹೋರಾಟ, ಸಂಬಳಕ್ಕಾಗಿ ಹೋರಾಟಗಳು ನಡೆಯುತ್ತವೆ. ಮೀಸಲಾತಿ ಯಾರಿಗೆ ಸಿಗುತ್ತದೆಯೋ ಅವರಿಗೆ ಸಿಗಲಿ. ಸರ್ಕಾರ ಸಂವಿಧಾನ ಬದ್ಧವಾಗಿ, ನ್ಯಾಯಾಲಯಗಳ ಆದೇಶ ಪಾಲಿಸಿ ಕೆಲಸವನ್ನು ಮಾಡುತ್ತದೆ. ಮೀಸಲಾತಿ ಲಾಭ ಯಾರಿಗೆ ಸಿಗಬೇಕೋ ಅವರಿಗೆ ಸಿಗಲಿ. ಆದರೆ, ಮೀಸಲಾತಿ ಎನ್ನುವುದು ಕೆಲ ಬೆರಳೆಣಿಕೆ ಜನರಿಗೆ ಇದರ ಹೆಚ್ಚು ಲಾಭ ಸಿಗುತ್ತದೆ. ರಾಜಕೀಯದವರು ಮೀಸಲಾತಿ ಹೋರಾಟ ಮಾಡಬೇಕು, ಮಾಡುತ್ತಾರೆ. ಆದರೆ, ಸಾಮಾನ್ಯ ಜನರಿಗೆ ತಮ್ಮ ಕಾಯಕದ ಬಗ್ಗೆ ಗಮನ ಇರಬೇಕು. ಕಾಯಕದಲ್ಲಿ ಮೀಸಲಾತಿ ಬೇಕಾಗಿಲ್ಲ ಎಂದರು.
ಇವತ್ತು ಪ್ರದೇಶ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು ಮೀಸಲಾತಿಯಿಂದ ಈ ಹಂತಕ್ಕೆ ಬಂದಿಲ್ಲ. ಚಹಾ ಮಾರುತ್ತಿದ್ದ ಅವರು ತಮ್ಮ ಕರ್ತವ್ಯದಿಂದ ಮೇಲೆ ಬಂದಿದ್ದಾರೆ. ಅಬ್ದುಲ್ ಕಲಾಂ ಅವರು ಮೀಸಲಾತಿಯಿಂದ ಬೆಳೆದಿಲ್ಲ. ಪೇಪರ ಹಂಚುತ್ತಿದ್ದರು. ಕಾಯಕದ ಮೇಲೆ ಭರವಸೆ, ಶ್ರದ್ಧೆಯಿಂದ ಬೆಳವಣಿಗೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೀಸಲಾತಿ ಬಗ್ಗೆ ನನಗೆ ವಿರೋಧ ಇಲ್ಲ. ಮೀಸಲಾತಿಗೆ ಯಾರಿಗೆ ಸಿಗಬೇಕು, ಅವರಿಗೆ ಸಿಗಲಿ. ಆದರೆ, ಮೀಸಲಾತಿಗಿಂತ ನಮ್ಮ ಹಣೆ ಬರಹ ಬದಲಾಗುವುದು ಕಾಯಕದಿಂದ ಎಂದು ಹೇಳಿದರು.

ಡಾ.ರಾಜಕುಮಾರ ಅವರ ೧೦೦ಕ್ಕೂ ಅಧಿಕ ಚಿತ್ರ ನೋಡಿದ್ದೇನೆ:
ಉತ್ಸವದಲ್ಲಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಡಾ.ವಿಜಯ ಸಂಕೇಶ್ವರ ಅವರು, ಕನ್ನಡ ಚಲನ ಚಿತ್ರರಂಗ, ರಂಗಭೂಮಿ, ಕಲಾವಿದರ ಸಾಧನೆಗಳನ್ನು ಮೆಲಕು ಹಾಕಿದರು.
ಚಿತ್ರನಟರು ಎಂದ ಕೂಡಲೇ ಏನೇನೋ ಕಲ್ಪನೆಗಳು ಇರುತ್ತವೆ. ಚಿತ್ರರಂಗ, ನಾಟಕದಲ್ಲಿ ಬೆಳೆದು ಬರಲು ಸಾಕಷ್ಟು ಸಾಧನೆ ಮಾಡಿರುತ್ತಾರೆ. ೬೦ ವರ್ಷದ ಹಿಂದೆ ನಾನು ಬಿ.ಆರ್.ಪಂತಲು ಅವರ ಸ್ಕೂಲ್ ಮಾಸ್ಟರ ಚಿತ್ರ ನೋಡಿದ್ದೆ. ಅಲ್ಲಿಂದ ಇಲ್ಲಿವರೆಗೂ ಸಾವಿರಕ್ಕೂ ಅಧಿಕ ಚಿತ್ರ ನೋಡಿದ್ದೇನೆ. ಡಾ.ರಾಜಕುಮಾರ ಅವರ ಒಂದು ನೂರಕ್ಕೂ ಅಽಕ ಚಿತ್ರ ನೋಡಿದ್ದೇನೆ. ನಾಟಕದ ಹಿನ್ನಲೆಯಿಂದ ಯಾರು ಚಿತ್ರರಂಗಕ್ಕೆ ಬಂದಿದ್ದಾರೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಅದಕ್ಕೆ ಉದಾಹರಣೆ ಎಂದರೆ ಡಾ.ರಾಜಕುಮಾರ ಹಾಗೂ ಅನಂತನಾಗ ಎಂದರು.
ಡಾ.ರಾಜುಮಾರ ಒಬ್ಬ ಕುಸ್ತಿಪಟು ಅಲ್ಲ, ಯೋಗಪಟು ಆಗಿರಲಿಲ್ಲ. ತಮ್ಮ ೫೦ನೇ ವಯಸ್ಸಿನ ಬಳಿಕ ಯೋಗ ಕಲಿತು ಯೋಗ ಸಾಧಕರಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡಿದರು. ಅಭಿಮಾನಿಗಳನ್ನು ದೇವರು ಎಂದು ಕರೆದ ಶ್ರೇಷ್ಠ ನಟ ಎಂದು ಕೊಂಡಾಡಿದರು.
ಹಾಗೆಯೇ ಅನಂತನಾಗ್ ಹಾಗೂ ಅಮಿತಾ ಬಚ್ಚನ್ ಅವರ ಎದುರಿಸಿದ ಕಷ್ಟ, ಬೆಳೆದು ಬಂದ ದಾರಿ. ಇವತ್ತು ತಮ್ಮ ಕ್ಷೇತ್ರಗಳಲ್ಲಿ ಸಾಧಿಸಿರುವ ಯಶಸ್ಸು ಹಾಗೂ ಇಂತ ಸಾಧಕ ಕಲಾವಿದರು ಇಂದಿನ ಕಲಾವಿದರಿಗೆ ಪ್ರೇರಣೆ ಆಗಬೇಕು ಎಂದು ಕಿವಿಮಾತು ಹೇಳಿದರು.

ಮೊದಲೆಲ್ಲ ವರ್ಷಗಟ್ಟಲೇ ಚಿತ್ರಗಳು ಓಡುತ್ತಿದ್ದವು. ಬಂಗಾರದ ಮನುಷ್ಯ ಒಂದುವರೆ ವರ್ಷ ನಡೆದಿತ್ತು. ಇವತ್ತು ಥೇಟರಗಳಲ್ಲಿ ಒಂದು ವಾರ ಓಡುವುದು ಕಷ್ಟವಾಗಿದೆ. ಪ್ರೇಕ್ಷಕರಿಗೆ ಕ್ರೇ, ಫೈಟಿಂಗ್ ಹಾಗೂ ಇನ್ನು ಏನೇನೋ ವಿಷಯಗಳಲ್ಲಿ ಆಸಕ್ತಿ ಬೆಳೆದಿದೆ. ಇದು ನಿಜಕ್ಕೂ ದುರಂತ. ಇವತ್ತು ಚಿತ್ರ ನಿರ್ಮಿಸಲು ಮುಂದಾಗುವ ನಿರ್ಮಾಪಕರು ಮುಂದಿನ ಪೀಳಿಗೆಗೆ ಮಾದರಿ ಆಗುವ ಚಿತ್ರಗಳನ್ನು ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.

ವಿಜಯಾನಂದ ಚಿತ್ರದ ತುಣುಕುಗಳ ಪ್ರದರ್ಶನ:
ಸಿದ್ದನಕೊಳ್ಳದಲ್ಲಿ ನಡೆದ ಸಿದ್ಧಶ್ರೀ ಉತ್ಸವ ಹಾಗೂ ಚಲನಚಿತ್ರೋತ್ಸವದಲ್ಲಿ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ವಿಜಯಾನಂದ ಚಿತ್ರದ ಕೆಲ ತುಣಕುಗಳನ್ನು ಪರದೇ ಮೇಲೆ ಪ್ರದರ್ಶಿಸಲಾಯಿತು. ಹಾಗೆಯೇ ಹುಲಿಗೆಮ್ಮ ದೇವಿ ಚಿತ್ರದ ಟ್ರೇಲರ ಸಹ ಉತ್ಸವದಲ್ಲಿ ಬಿಡುಗಡೆ ಮಾಡಿತು. ಈ ಹಿಂದೆ ಜೀ ವಾಹಿನಿಯಲ್ಲಿ ವಿಕೆಂಡ್ ವಿತ್ ರಮೇಶನಲ್ಲಿ ಬಿತ್ತರವಾಗಿದ್ದ ಡಾ.ಸಂಕೇಶ್ವರ ಎಪಿಸೋಡ್‌ನ ಕೆಲ ತುಣಕುಗಳನ್ನು ಉತ್ಸವದಲ್ಲಿ ಬಿತ್ತರಿಸಲಾಯಿತು.
-=======
ಕೋಟ್…
ಡಾ.ವಿಜಯ ಸಂಕೇಶ್ವರ ಅಂತ ಸಾಧಕರು ಸಿದ್ದನಕೊಳ್ಳಕ್ಕೆ ಆಗಾಗ್ಗೆ ಬರುತ್ತಿರಬೇಕು.ಈ ಕ್ಷೇತ್ರದ ಮಹಾತಪಸ್ವಿ ಸಿದ್ದಜ್ಜಪ್ಪ ಅವರಿಗೆ ಸಂಕೇಶ್ವರ ಅವರನ್ನು ಹೋಲಿಕೆ ಮಾಡಬಹುದು. ಸಿದ್ದಪ್ಪಜ್ಜ ಭಕ್ತರಲ್ಲಿ ದೇವರನ್ನು ಕಾಣು ಅಂದಿದ್ದರು. ಸಂಕೇಶ್ವರ ಅವರ ಕಾಯಕದಲ್ಲಿ ದೇವರನ್ನು ಕಾಣು ಎನ್ನುತ್ತಾರೆ. ಇಂಥವರ ಮಾರ್ಗದರ್ಶನ ನಮಗೆ ಬೇಕು.
ಡಾ.ಶಿವಕುಮಾರ ಸ್ವಾಮೀಜಿ
ಧರ್ಮಾಧಿಕಾರಿಗಳು, ಸುಕ್ಷೇತ್ರ ಸಿದ್ದನಕೊಳ್ಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net