

ತುಮಕೂರು: ಸಾಕಷ್ಟು ಕಾನೂನು ಬಂದ ನಂತರ ಕಾಲೇಜು ಕ್ಯಾಂಪಸ್ಗಳಲ್ಲಿ ರ್ಯಾಗಿಂಗ್ ಕಡಿಮೆಯಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಕಾನೂನು ಪಾಲಿಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶನಿವಾರ ನಗರದ ಶ್ರೀಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿವಿ ವ್ಯಾಪ್ತಿಯ ಶ್ರೀಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಶೈಕ್ಷಣಿಕ ವರ್ಷದ ವೈದ್ಯಕಿಯ ವಿದ್ಯಾರ್ಥಿಗಳ 'ವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣ ಪಡೆಯಬೇಕಾದರೆ ನಿರಂತರ ಅಧ್ಯಯನ ಅಗತ್ಯ, ಕಾಲೇಜು ದಿನಗಳನ್ನು ಅನುಭವಿಸಿ ಆದರೆ, ಸುಮ್ಮನೆ ಸುತ್ತಾಡಿ ಕಾಲಹರಣ ಮಾಡಬೇಡಿ. ಕ್ರಿಯಾತ್ಮಕವಾಗಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳವ ಮೂಲಕ ಕಾಲ ಕಳೆಯಿರಿ. ಬಿಳಿ ಸಮವಸ್ತ್ರ ಧರಿಸಿದ ನಂತರ ನಿಮ್ಮಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದರು.
ಸಾಹೇ ವಿವಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ ಮಾತನಾಡಿ, ಇಂದಿನ ಕಲಿಕಾ ಪದ್ದತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ತಂತ್ರಜ್ಞಾನದಿಂದ ಕಲಿಕೆ ಸರಳವಾಗಿದೆ, ಪೈಪೋಟಿ ಕೂಡ ಇದೆ. ವಿಶ್ವ ಮಟ್ಟದಲ್ಲಿ ಫ್ಲೋರಿಡಾ ವಿವಿ, ಆವಲಾನ್ ವಿವಿಗಳೊಂದಿಗೆ ವಿದ್ಯಾರ್ಥಿ, ಪ್ರಾಧ್ಯಾಪಕರ, ತಂತ್ರಜ್ಞಾನ ಹಾಗೂ ಸಾಂಸ್ಕತಿಕ ವಿನಿಮಯಕ್ಕೆ ಸಂಬಂದಪಟ್ಟಂತೆ ಅಂತರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇಂದು ಸಿದ್ದಾರ್ಥ ಸಂಸ್ಥೆಯ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಾಧ್ಯವಾಗಿಸಿದೆ ಎಂದರು.
ವಿದ್ಯಾರ್ಥಿಗಳು ಕೂಡ ಆತ್ಮವಿಶ್ವಾಸದೊಂದಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗನುಗುಣವಾಗಿ ಗಂಭೀರವಾಗಿ ಕ್ರೀಡೆ, ಸಾಂಸ್ಕತಿಕ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗಲ್ಲೂ ತೊಡಗಿಸಿಕೊಂಡು ಉನ್ನತ ಮಟ್ಟದಲ್ಲಿ ಭಾಗವಹಿಸಿ ಬೆಳೆಯಬೇಕು. ತಾವು ಕೂಡ ಶೈಕ್ಷಣಿಕ ಆಧ್ಯಯನಕ್ಕೆ ತೊಂದರೆ ಮಾಡಿಕೊಳ್ಳದ ಹಾಗೆ ರಾಷ್ಟ್ರಮಟ್ಟದ ಅಂತರ್ ವಿವಿ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದನ್ನು ಸ್ಮರಿಸಿದರು.
ಗ್ರಾಮಾಂತರ ಪ್ರದೇಶದವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ತಲುಪಿಸಲು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಗರಿಷ್ಠ ಮಟ್ಟದ ಸಾಧನೆ ಮಾಡಿರುವುದು ಸಂತೋಷದ ವಿಷಯವಾಗಿದೆ. ವೈದ್ಯಕಿಯ ಮಹಾವಿದ್ಯಾಲಯದಿಂದ 40 ಸಾವಿರ ವೈದ್ಯರು ಹಾಗೂ 30 ಸಾವಿರ ಇಂಜಿನಿಯರ್ಗಳನ್ನು ಸಮಾಜಕ್ಕೆ ಸಿದ್ದಾರ್ಥ ಸಂಸ್ಥೆ ನೀಡಿದೆ ಎಂದರು.
ರಾಜ್ಯ ವೈದ್ಯಕಿಯ ಶಿಕ್ಷಣ ನಿರ್ದೇಶಕ ಡಾ.ಬಿ.ಎಲ್.ಸುಜಾತ ರಾಥೋಡ್ ಮಾತನಾಡಿ, ಸಮಾಜದಲ್ಲಿ ವೈದ್ಯಕಿಯ ವೃತ್ತಿಗೆ ಜವಾಬ್ದಾರಿಯುತ ಸ್ಥಾನವಿದೆ. ಅದರ ಸ್ಥಾನ-ಮಾನಗಳನ್ನು ಅರಿತು ಕಾರ್ಯನಿರ್ವಹಣೆಗೆ ನಿಮ್ಮ ಮನೋಸ್ಥಿತಿಗಳನ್ನು ಸಜ್ಜುಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ತಂತ್ರಜ್ಞಾನ ಅಳವಡಿಕೆ, ಪರಸ್ಪರ ಶೈಕ್ಷಣಿಕ ಅಧ್ಯಯನ ಹಾಗೂ ಸಾಂಸ್ಕತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ಜಾಗತಿಕ ಪೈಪೋಟಿ ಎದರಿಸಲು ಸನ್ನದ್ದರಾಗುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಹೇ ವಿವಿ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದರು.
ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಟ್ರಸ್ಟಿ ಕನ್ನಿಕಾ ಪರಮೇಶ್ವರ, ಸಾಹೇ ವಿವಿ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್.ಕುರಿಯನ್, ಪರಿಕ್ಷಾಂಗ ನಿಯಂತ್ರಕಡಾ.ಜಿ.ಗುರುಶಂಕರ್, ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡಾ.ದಿವಾಕರ್, ಡಾ. ಪ್ರವಿಣ್ ಕುಡುವಾ, ಉಪ ಪ್ರಾಂಶುಪಾಲ ಡಾ,ಪ್ರಭಾಕರ್ ಇದ್ದರು.