

ಬೆಂಗಳೂರು: ಕರೊನಾ ನಿಯಂತ್ರಣ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ವಾಗ್ಯುದ್ಧ ಮುಂದುವರಿದಿದೆ. ‘‘ನಾವು ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ’’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಕ್ಕೆ ಇಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘‘ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ’’ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನಿಗೂ ಸೋಂಕು, 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!
‘‘ಬೆಂಗಳೂರಿನಲ್ಲಿ ಕರೊನಾ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲಿಕ್ಕಾ? ಇಲ್ಲವೇ, ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕಾ? ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ?’’ ಎಂದೂ ಕಾಲೆಳೆದಿದ್ದಾರೆ.
‘‘ಕರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಅವರಿಂದ ಶಹಭಾಸ್‌ಗಿರಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕರೊನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನೂ ಪ್ರಧಾನಿಗೆ ತೋರಿಸಿದ್ದರೆ ಇನ್ನಷ್ಟು ಶಹಭಾಸ್ ಅನ್ನುತ್ತಿದ್ದರೋ ಏನೋ?’’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.