

ಬೆಂಗಳೂರು: ರಾಜಕೀಯದಲ್ಲಿ ಆಗಾಗ ಪ್ರಸ್ತಾಪವಾಗುತ್ತಲೇ ಇರುವ ರಾಮನಾಮ ಇದೀಗ ವಿಧಾನಸಭೆ ಅಧಿವೇಶನದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಒಂದಷ್ಟು ಚರ್ಚೆಗೆ ಕಾರಣವಾಯಿತು. ಸುಬ್ರಹ್ಮಣ್ಯ ಸ್ವಾಮಿ ಹೇಳಿಕೆಯಿಂದ ಶುರುವಾದ ಈ ರಾಮನಾಮ ಸಿದ್ದರಾಮಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಸದನದಲ್ಲಿದ್ದ ಹಲವರ ಬಾಯಲ್ಲೂ ಅನುರಣಿಸುವಂತೆ ಆಯಿತು.
ಬೆಲೆ ಏರಿಕೆ ಬಗೆಗಿನ ತಮ್ಮ ಭಾಷಣದ ವೇಳೆ ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ವೊಂದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, 'ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ., ಸೀತೆಯ ನೇಪಾಳದಲ್ಲಿ 53 ರೂ. ಹಾಗೂ ರಾವಣದ ಲಂಕಾದಲ್ಲಿ 51 ರೂ. ಇದೆ ಎಂದು ಸುಬ್ರಹ್ಮಣ ಸ್ವಾಮಿ ಟ್ವೀಟ್ ಮಾಡಿದ್ದಾರೆ ಎಂದರು.
ಆಗ ಕಾಂಗ್ರೆಸ್ ಶಾಸಕರು, 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುತ್ತ ಬಿಜೆಪಿಯನ್ನು ಛೇಡಿಸಿದರು. ಅದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ಈ ನೆಪದಲ್ಲಾದರೂ ನೀವು ಶ್ರೀ ರಾಮನ ಘೋಷಣೆ ಕೂಗುತ್ತಿದ್ದೀರಿ ಎಂಬುದೇ ಸಂತಸದ ವಿಷಯ' ಎಂದು ತಿರುಗೇಟು ನೀಡಿದರು.
ಅದಕ್ಕೆ ಸಿದ್ದರಾಮಯ್ಯ, 'ರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿದ್ದೀರಾ?' ಎಂದು ಪ್ರಶ್ನಿಸಿದರಲ್ಲದೆ, 'ನನ್ನ ಹೆಸರಿನಲ್ಲಿಯೇ ರಾಮನಿದ್ದಾನೆ. ನಿಮ್ಮೆಲ್ಲರಿಗಿಂತ ರಾಮನ ಮೇಲೆ ಹೆಚ್ಚು ಭಕ್ತಿ ನನಗಿದೆ' ಎಂದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 'ರಾಮನ ವಿಷಯ ಬಂದಾಗ ಒಂದು ನೆನಪಾಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀವು ದೇಣಿಗೆ ನೀಡಿದಿರಾ?' ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ನಾನು ನಮ್ಮ ಊರಿನಲ್ಲಿ ರಾಮನ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಿದ್ದೇನೆ' ಎಂದರು. ಜತೆಗೆ 'ಬಿಜೆಪಿಯವರು ತಮ್ಮ ಆತ್ಮಸಾಕ್ಷಿಯಾಗಿ ಹೇಳಲಿ, ಇಂಧನ ಬೆಲೆ ಹೆಚ್ಚಳಕ್ಕೆ ಅವರ ಸಮ್ಮತಿ ಇದೆಯೇ?' ಎಂದು ಪ್ರಶ್ನಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ