

ಬೆಂಗಳೂರು: ರಾಜ್ಯದ ಪ್ರತಿಯೊಬ್ಬರ ಮೇಲೂ 85 ಸಾವಿರ ರೂ. ಸಾಲ ಇದೆ. ರಾಜ್ಯವನ್ನು ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಗುತ್ತಿಗೆದಾರರು ಕಮೀಷನ್ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದಿರಲಿಲ್ಲ. ಪ್ರಧಾನಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಾ ಖಾವೂಂಗಾ ಖಾನೇ ದೂಂಗ ಎನ್ನುವ ಪ್ರಧಾನಿಯವರದ್ದು ಢೋಂಗಿತನವಲ್ಲವೇ? ವರ್ಗಾವಣೆ, ನೇಮಕ, ಬಡ್ತಿಗೂ ಲಂಚ ಕೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಖಾಸಗಿಯಾಗಿ ನಮ್ಮ ಬಳಿ ಎಲ್ಲ ಹೇಳುತ್ತಾರೆ. ಅಂಗಡಿ, ಹೋಟೆಲ್ನಲ್ಲಿ ಮೆನು ಇಟ್ಟಂತೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಈ ಸರ್ಕಾರ ಅಲಿಬಾಬ ಮತ್ತು ಚಾಲೀಸ್ ಚೋರ್ ರೀತಿ ಎಂದು ಕಿಡಿಕಾರಿದ್ದಾರೆ.
ಜನರು ಮತ್ತು ಅಧಿಕಾರಿಗಳು ಸರ್ಕಾರದ ವಿಚಾರದಲ್ಲಿ ರೋಸಿ ಹೋಗಿದ್ದಾರೆ. ದ್ವೇಷದ ರಾಜಕಾರಣದಿಂದ ಬಡವರು ಮತ್ತು ರೈತರಿಗೆ ನೆಮ್ಮದಿಯಿಲ್ಲ. ಎಲ್ಲರೂ ಆತಂಕದಿಂದ ಬದುಕುತ್ತಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿ ಶೂನ್ಯ, ಸಾಲದ ಹೊರೆ ಹೆಚ್ಚಾಗಿದೆ. ಅಭಿವೃದ್ಧಿಯನ್ನು ಎರಡು ದಶಕಕ್ಕೆ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.