ಮೈಸೂರು ದಸರಾ 2023| ಬರಗಾಲದಲ್ಲೂ ಜನ ಸಂತೋಷವಾಗಿದ್ದಾರಲ್ಲಾ ಎಂಬುದೇ ಖುಷಿ: ಸಿಎಂ ಸಿದ್ದರಾಮಯ್ಯ

Siddaramaiah
Published on

ಮೈಸೂರು: ಬರಗಾಲದಲ್ಲೂ ಜನ ಸಂತೋಷವಾಗಿದ್ದಾರಲ್ಲಾ ಎಂಬುದೇ ಖುಷಿ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಏರ್​ಶೋ ವೀಕ್ಷಣೆ ಬಳಿಕ ಮಾತನಾಡಿದ ಸಿಎಂ ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ. ಜನರು ಖುಷಿಯಾಗಿರುವುದು ಮುಖ್ಯ ಎಂದಿದ್ದಾರೆ.

ನಾನು ದೆಹಲಿಗೆ ಭೇಟಿ ನೀಡಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವರಾದ ರಾಜ್​ನಾಥ್​ ಸಿಂಗ್​ ಅವರಿಗೆ ಈ ಬಾರಿಯ ದಸರಾದಲ್ಲಿ ಏರ್​ಶೋ ಆಯೋಜಿಸುವಂತೆ ಮನವಿ ಮಾಡಿದ್ದೆ. ಅವರು ಸಹ ಒಪ್ಪಿಗೆ ಸೂಚಿಸಿದರು. ಅದರಂತೆ ಏರ್​ಶೋ ನಡೆದಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಒಮ್ಮೆ ಏರ್​ಶೋ ಮಾಡಿಸಿದ್ದೆ.

ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ. ಜನರು ಖುಷಿಯಾಗಿರುವುದು ನಮಗೆ ಮುಖ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬರಗಾಲ ಬಂದಿದೆ. ಅದರ ನಡುವೆಯೂ ಜನರು ಖುಷಿಯಾಗಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.

ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿದ್ದೇವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.

ಕುಡಿಯುವ ನೀರು ಹಾಗೂ ಮೇವಿನ ವಿಚಾರದಲ್ಲಿ ಎಷ್ಟೇ ಹಣ ಖರ್ಚಾದರೂ ಕೊಡುತ್ತೇವೆ ಎಂದು ಹೇಳಿದ್ದೇವೆ. ಮೇವಿಗೆ ಯಾವುದೇ ಅಭಾವವಿಲ್ಲ. ಸಾಕಷ್ಟು ಮೇವನ್ನು ಸಂಗ್ರಹಿಸಲಾಗಿದ್ದು, ಹೊಸದಾಗಿ ಬೆಳೆಯಲು ಹಾಗೂ ಸಂಗ್ರಹಿಸಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್​ಶೋ ವೀಕ್ಷಣೆ ಬಳಿಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net