VIDEO| ಅಫ್ಘಾನಿಸ್ತಾನ-ಪಾಕ್​ ನಡುವಿನ ಪಂದ್ಯಕ್ಕೆ ಭಾರತ ಧ್ವಜಕ್ಕೆ ನೋ ಎಂಟ್ರಿ; ಕಸದ ಬುಟ್ಟಿಗೆ ಎಸೆದು ಅವಮಾನ ಮಾಡಿದ ಪೊಲೀಸರು

chennai police
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಭಾರತದ ಧ್ವಜ ಹಿಡಿದು ಬಂದಿದ್ದ ಕ್ರೀಡಾಭಿಮಾನಿಗಳನ್ನು ಪೊಲೀಸ್​ ಅಧಿಕಾರಿಯೊಬ್ಬರು ತಡೆದಿರುವ ಘಟನೆ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಧಿಕಾರಿಯು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಭಾರತದ ಧ್ವಜವನ್ನು ಹಿಡಿದು ಪಂದ್ಯವನ್ನು ವೀಕ್ಷಿಸಲು ಬಂದ ಕ್ರೀಡಾಭಿಮಾನಿಗಳನ್ನು ತಡೆಯುವ ಪೊಲೀಸ್​ ಅಧಿಕಾರಿ ಒಳಗೆ ಹೋಗದಂತೆ ತಾಕೀತು ಮಾಡುತ್ತಾರೆ. ಯಾಕೆ ಎಂದು ಪ್ರಶ್ನಿಸಿದಾಗ ಆತ ಭಾರತದ ಧ್ವಜಗಳನ್ನು ಒಳಗೆ ತೆಗೆದು ಹೋಗಲು ಅವಕಾಶವಿಲ್ಲ ಎಂದು ಹೇಳಿ ಅವರ ಕೈಯಲ್ಲಿದ್ದ ಬಾವುಟಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆಯುತ್ತಾರೆ.

ಇದನ್ನು ನೋಡಿದ ಕೆಲವರು ಅಧಿಕಾರಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಯು ಕಸದ ಬುಟ್ಟಿಗೆ ಹಾಕಿದ್ದ ಬಾವುಟಗಳನ್ನು ಹೊರತೆಗೆದಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಆಡಳಿತರೂಢ ಡಿಎಂಕೆ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ವಿಸ್ತೃತ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಾವುಟಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಭಂಧಿಸಿಲ್ಲ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net