ಸಿದ್ದರಾಮಯ್ಯರನ್ನೇ ಸಾಯಿಸಿದ ಮೆಟಾ: ಅನುವಾದದ ಎಡವಟ್ಟಿನಿಂದ ಸಿಎಂ ಶ್ರೇಷ್ಠತೆಗೆ ಪೆಟ್ಟು! Meta

Meta
Published on

Meta : ಅನುವಾದ ಮಾಡುವಾಗ ಸ್ವಲ್ಪ ಯಾಮಾರಿದರೇ ಎಂಥಾ ದೊಡ್ಡ ಪ್ರಮಾದ ಆಗಬಹುದು ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರದಲ್ಲಿ ಸಾಮಾಜಿಕ ಜಾಲತಾಣ ದೈತ್ಯ "ಮೆಟಾ" ಕಂಪನಿ ಮಾಡಿದ ಒಂದು ಎಡವಟ್ಟು ತಾಜಾ ಉದಾಹರಣೆಯಾಗಿದೆ.

ಕನ್ನಡದಲ್ಲಿ ಬರೆದಿದ್ದನ್ನು ಇಂಗ್ಲಿಷ್​ಗೆ ಅಥವಾ ಇಂಗ್ಲಿಷ್​ನಲ್ಲಿ ಬರೆದಿದ್ದನ್ನು ಕನ್ನಡದಲ್ಲಿ ಅನುವಾದ ಮಾಡುವಾಗ ಮೂಲ ಅರ್ಥಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದನ್ನು ನೋಡದೇ ಸುಮ್ಮನೇ ಅನುವಾದ ಮಾಡಿದರೆ ಎಷ್ಟೊಂದು ಕೆಟ್ಟದಾಗಿರುತ್ತದೆ ಅನ್ನೋದನ್ನು ಮೆಟಾ ಕಂಪನಿಯ ಈ ಎಡವಟ್ಟು ತೋರಿಸಿಕೊಟ್ಟಿದೆ.

ಮೆಟಾದ ಸ್ವಯಂಚಾಲಿತ ಅನುವಾದ ಸಾಧನವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸಾಯಿಸಿದೆ. ಕರ್ನಾಟಕದ ಮುಖ್ಯಮಂತ್ರಿಗಳ ಕಚೇರಿ (CMO) ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಸಂತಾಪ ಸಂದೇಶವನ್ನು ಅನುವಾದಿಸುವಾಗ ಮೆಟಾದ ಬಹುದೊಡ್ಡ ದೋಷ ಕಂಡುಬಂದಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಶ್ರೇಷ್ಠತೆಗೆ ಮೆಟಾ ಎಡವಟ್ಟು ಪೆಟ್ಟು ನೀಡಿದೆ.

ಏನಾಯಿತು?

ಹಿರಿಯ ನಟಿ ಬಿ. ಸರೋಜಾ ದೇವಿ ಇತ್ತೀಚೆಗೆ ನಿಧನರಾದರು. ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಲು ಮೂಲತಃ ಕನ್ನಡದಲ್ಲಿ ಬರೆಯಲಾಗಿದ್ದ ಪೋಸ್ಟ್ ಅನ್ನು ಇಂಗ್ಲಿಷ್‌ಗೆ ತಪ್ಪಾಗಿ ಅನುವಾದಿಸಲಾಗಿದೆ. ಇದು ಸಿದ್ದರಾಮಯ್ಯರಿಂದ ತೀವ್ರ ಕೋಪಕ್ಕೆ ಗುರಿಯಾಗಿದೆ. ಅಲ್ಲದೆ, ಮೆಟಾಗೆ ಖಡಕ್​ ಸಂದೇವನ್ನು ಸಹ ಸಿದ್ದರಾಮಯ್ಯ ರವಾನಿಸಿದ್ದಾರೆ.

ಮೆಟಾ ಅನುವಾದ ಏನಿತ್ತು?

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು ಎಂದು ಪೋಸ್ಟ್‌ನ ದೋಷಪೂರಿತ ಅನುವಾದದಲ್ಲಿ ಬರೆಯಲಾಗಿದೆ.

Meta 1

ಸಿಎಂ ಆಕ್ರೋಶ

ಅನುವಾದ ದೋಷಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅನುವಾದವು ಸಂದೇಶಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಅಧಿಕೃತ ಸಂವಹನ ವ್ಯವಸ್ಥೆಯಲ್ಲಿ ಇದು ಅಪಾಯಕಾರಿ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಹಾಗೆಯೇ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಎಂದು ನಾಗರಿಕರು ತಿಳಿದಿರಬೇಕಾಗುತ್ತದೆ. ಟೆಕ್ ದಿಗ್ಗಜ ಸಂಸ್ಥೆಗಳ ಇಂತಹ ನಿರ್ಲಕ್ಷ್ಯವು ಸಾರ್ವಜನಿಕ ತಿಳಿವಳಿಕೆ ಮತ್ತು ನಂಬಿಕೆಗೆ ಹಾನಿ ಉಂಟು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಆಟೋ ಕನ್ನಡ ಅನುವಾದವನ್ನು ಸ್ವಲ್ಪ ಸಮಯದವರೆಗೆ ಅನುಮಾನತ್ತಿನಲ್ಲಿ ಇಡಲು ಕೋರಿದ್ದಾರೆ.

ಕ್ಷಮೆಯಾಚಿಸಿದ ಮೆಟಾ

ಮುಖ್ಯಮಂತ್ರಿ ಕಚೇರಿಯಿಂದ ಮೆಟಾಗೆ ಪತ್ರ ಬರೆದು ಸಮಸ್ಯೆಯ ಬಗ್ಗೆ ಗಮನ ಸೆಳೆದು ಸರಿಪಡಿಸುವಂತೆ ಕೋರಲಾಗಿತ್ತು. ಈ ನಡುವೆ ಮೆಟಾ ಸಂಸ್ಥೆ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೋರಿದೆ. ಅಲ್ಲದೆ, ಅನುವಾದದ ದೋಷವನ್ನು ಸರಿಪಡಿಸಿದೆ. ಆದರೆ, ಆಟೋ ಅನುವಾದವನ್ನು ಅಮಾನತ್ತಿನಲ್ಲಿಡುವ ಬಗ್ಗೆ ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Meta 2

ಸಿಎಂ ಸ್ಥಾನದ ಶ್ರೇಷ್ಠತೆಗೆ ಪೆಟ್ಟು

ಸಿಎಂ ಸ್ಥಾನದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇಡೀ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಯನ್ನು ಸಾಕಷ್ಟು ಮಂದಿ ಅನುಸರಿಸುತ್ತಿರುತ್ತಾರೆ. ಅವರ ನಡೆ, ನುಡಿ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ ಅವರ ಖಾತೆಯಲ್ಲಿ ಈ ಅನುವಾದದ ದೋಷ ಕಂಡುಬಂದಾಗ ಜನರಲ್ಲಿ ತಪ್ಪು ಭಾವನೆ ಮೂಡುತ್ತದೆ. ಸಿಎಂ ಶ್ರೇಷ್ಠತೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಇಂತಹ ಪ್ರಮಾದಗಳು ಮತ್ತೆ ಆಗದಂತೆ ನೋಡಿಕೊಳ್ಳಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net