215ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಬಸವಣ್ಣ ಇನ್ಮುಂದೆ ಸಾಂಸ್ಕೃತಿಕ ನಾಯಕ: ಸಿಎಂ ಸಿದ್ದರಾಮಯ್ಯ ಘೋಷಣೆ

Flower Show
Published on

ಬೆಂಗಳೂರು: ಗಣರಾಜ್ಯೋತ್ಸವದ ನಿಮಿತ್ತ ಲಾಲ್​​ಬಾಗ್​ನಲ್ಲಿ ಆಯೋಜಿಸಲಾಗಿರುವ 215ನೇ ಫಲಪುಷ್ಪ ಪ್ರದರ್ಶನಕ್ಕೆ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಜನವರಿ 18) ಚಾಲನೆ ನೀಡಿದ್ದಾರೆ.

215ನೇ ಫಲಪುಷ್ಟ ಪ್ರದರ್ಶನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಪ್ರತಿರೂಪ ಅರಳಿದ್ದು, ಲಾಲ್​ಬಾಗ್​ನ ಗಾಜಿನಮನೆಯಲ್ಲಿ ಸೇವಂತಿಗೆ, ಗುಲಾಬಿ ಹೂವುಗಳಿಂದ ಅನುಭವ ಮಂಟಪ ನಿರ್ಮಾಣ ಮಾಡಲಾಗಿದೆ. 8 ಬಗೆಯ 32 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.

ಫಲಪುಷ್ಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಸಾಕಷ್ಟು ಜನ ಸ್ವಾಮೀಜಿಗಳು ನನ್ನನ್ನು ಭೇಟಿ‌ ಮಾಡಿ. ಸಾಂಸ್ಕೃತಿಕ ನಾಯಕ ಅಂತ ಬಸವಣ್ಣನವರನ್ನ ಕರೆಯಬೇಕು ಎಂದು ಒತ್ತಾಯ ಮಾಡಿದರು. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಇನ್ಮುಂದೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತದೆ. ಶಿಕಾರಿಪುರದಲ್ಲಿರುವ 46 ಎಕರೆ ಜೈಲಿನ ಜಾಗಕ್ಕೆ ಅಲ್ಲಮಪ್ರಭು ಎಂದು ನಾಮಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಲಾಲ್​ಬಾಗ್​ನಲ್ಲಿ ಎಂದಿನಂತೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. 12ನೇ ಶತಮಾನದಲ್ಲಿ ಸಮಾನತೆಯನ್ನು ನಿರ್ಮಿಸಿ ಜಾತಿ ಪದ್ಧತಿ ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣನವರು ಹೋರಾಡಿದ್ದರು. ಬಸವಣ್ಣನವರ ಸಂದೇಶವನ್ನ ಜನರಿಗೆ ತಲುಪಿಸುವ ಕೆಲಸವನ್ನ ತೋಟಗಾರಿಕೆ ಇಲಾಖೆ ಮಾಡಿದೆ. ಬೆಂಗಳೂರು ಜನರು ಇದರ ಸದುಪಯೋಗ ಪಡೆದುಕೊಳ್ಳಿ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಬೆಳವಣಿಗೆಯ ಪರಿಚಯಿಸುವ ಕೆಲಸ ತೋಟಗಾರಿಕೆ ಇಲಾಖೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net