

ಕಲಬುರಗಿ: ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ ಮುಗಿಲು ಮುಟ್ಟಿದೆ. ಬಿಜೆಪಿಯವರಿಗೆ ಈ ಸಲ ಚುನಾವಣೆಯಲ್ಲಿ ಸೋಲುವ ಭಯ ಹೊಕ್ಕಿದೆ. ಅದಕ್ಕಾಗಿಯೇ ವಾರಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ , ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿ ತಿರುಗೇಟು ನೀಡಿದರು.
ಯಾದಗಿರಿಯಲ್ಲಿ ಇಂದು ಆಯೋಜಿಸಿದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳವ ಮೊದಲು ನಗರದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿ, ಈ ಸಲ ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಸೋಲಿನ ಭಯ ಕಾಡುತ್ತಿರುವುದು ಕಾಂಗ್ರೆಸ್ಸಿಗಲ್ಲ, ಬಿಜೆಪಿಗೆ ಎಂದರು. ಐದು ವರ್ಷಗಳಲ್ಲಿ ಬಡವರಿಗೆ ಒಂದಾದರೂ ಮನೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಬೇಕಿರುವುದರಿಂದ ನಾನು ಉತ್ತರ ಕರ್ನಾಟಕದಲ್ಲಿ, ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ಕರ್ನಾಟಕದಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಲಿದ್ದೇವೆ. ಸಾಮೂಹಿಕವಾಗಿ ಎಲ್ಲ ಮುಖಂಡರನ್ನು ಒಳಗೊಂಡು ಸಂಚಾರ ನಡೆಸಲಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಈ ಬಾರಿ ಸೋಲುವುದು ಖಚಿತ. ಜನ ಚುನಾವಣೆ ಬರುವುದನ್ನೇ ಕಾಯುತ್ತಿದ್ದಾರೆ. ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ, ವಕ್ತಾರ ಪ್ರಿಯಾಂಕ್ ಖರ್ಗೆ ಇದ್ದರು.