

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಸರ್ಕಲ್ ರಾತ್ರೋರಾತ್ರಿ ತಲೆ ಎತ್ತಿದೆ. ನಗರಕ್ಕೆ ಸಿಎಂ ಬಂದ ದಿನವೇ ಫಲಕ ಅನಾವರಣಗೊಂಡಿದೆ. ಪೋಟೋ ಹಾಕಲಾಗಿದೆ. ಇದು ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ. ನಿಯಮ ಮೀರಿ ಮತ್ತು ಪಾಲಿಕೆ ಅನುಮತಿ ಪಡೆಯದೆ ವೃತ್ತಕ್ಕೆ ಹೆಸರು ಇಡಲಾಗಿದೆ.
ಕೆಲವರು ಸೇರಿಕೊಂಡು ನಗರದ ಹೀರಾಪುರ ಕಡೆಯಿಂದ ಅಫಜಲಪುರ ರಸ್ತೆಗೆ ಕೂಡುವ ಮತ್ತು ಹೈಕೋರ್ಟ್ ಕಡೆಯಿಂದ ಬಂದು ಸೇರುವ ರಿಂಗ್‌ರೋಡ್‌ನಲ್ಲಿರುವ ಸರ್ಕಲ್‌ಗೆ ಸಿದ್ದರಾಮಯ್ಯ ಸರ್ಕಲ್ ಎಂದು ಹೆಸರು ಇಟ್ಟು ದೊಡ್ಡ ದೊಡ್ಡದಾಗಿರುವ ಕಟೌಟ್ ಹಾಕಲಾಗಿದೆ.
ನಗರದಲ್ಲಿ ರಾತ್ರೋರಾತ್ರಿ ವೃತ್ತವೊಂದಕ್ಕೆ ಸಿಎಂ ಹೆಸರು ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕೆಲಸವನ್ನು ಸಿದ್ದರಾಮಯ್ಯನವರ ಅಭಿಮಾನಿಗಳು ಮಾಡಿರುವ ಸಾಧ್ಯತೆ ಇದೆ. ಆದರೆ,ಯಾರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವೃತ್ತಕ್ಕೆ ನಾಮಕರಣ ಮಾಡಲು ಪಾಲಿಸಬೇಕಾದ ನಿಯಮಗಳನ್ನು ಪಾಲನೆ ಮಾಡಿಲ್ಲ, ನಿಯಮ ಉಲ್ಲಂಘಿಸಲಾಗಿದೆ ಎಂದು ಹಿಂದು ಸಂಘಟನೆಯವರು ದೂರಿದ್ದಾರೆ.