

ದಾವಣಗೆರೆ: ನಾನು ದಾರಿದ್ರ್ಯ ಸರ್ಕಾರ ಎಂದು ಕರೆದಿದ್ದಕ್ಕೆ ಬಜೆಟ್ ಮೂಲಕ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಈಗ ಎಲ್ಲಿದೆ ಉತ್ತರ ಮಿಸ್ಟರ್ ಯಡಿಯೂರಪ್ಪ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕಕ್ಕೆ 2500 ಕೋಟಿ ರೂ. ಕೇಳಿದ್ದರು. ಸರ್ಕಾರ ನೀಡಿದ್ದು 1500 ಕೋಟಿ ರೂ. ಮಾತ್ರ. ಬಜೆಟ್ ಮಂಡನೆ ಮರುದಿನ ನೀರಾವರಿಗೆ ಹತ್ತು ಸಾವಿರ ಕೋಟಿ ರೂ. ಪ್ರಕಟಿಸಿದ್ದಾರೆ. ಅದು ಹೇಗೆ ಸಾಧ್ಯ? ಇದರಿಂದ ಬಜೆಟ್ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತದೆ ಎಂದರು.
ಶಾದಿಭಾಗ್ಯ ರದ್ದಿಗೆ ಆಕ್ರೋಶ
ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅಲ್ಪಸಂಖ್ಯಾತರು ಮತ್ತು ದಲಿತರ ವಿರೋಧಿಗಳು. ಇದೇ ಕಾರಣಕ್ಕೆ ಶಾದಿ ಭಾಗ್ಯ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ದಲಿತರಿಗೆ ನೀಡಿದ ಹಣದಲ್ಲಿ ಕಡಿತವಾಗಿದೆ ಎಂದು ಆರೋಪಿಸಿದರು.
ರಾಷ್ಟವಿರೋಧಿ ಅಲ್ಲ
ಬೀದರ್ ಶಾಹೀನ್ ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನ ರಾಷ್ಟ್ರವಿರೋಧಿಯಲ್ಲ. ಅದು ಐಪಿಸಿ 124ಎ ಅಡಿಯಲ್ಲಿ ಇರಲ್ಲ. ಇದನ್ನು ನ್ಯಾಯಾಲಯವೇ ಹೇಳಿದೆ. ಆದರೂ ಅವರನ್ನು ಜೈಲಿಗೆ ತಳ್ಳಿದ್ದು ತಪ್ಪು.
ಪ್ರತ್ಯೇಕ ರಾಜ್ಯ ತಪ್ಪು
ಶಾಸಕ ಉಮೇಶ ಕತ್ತಿ ಬೇಕಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಕೊಳ್ಳಲಿ. ಆದರೆ, ಪ್ರತ್ಯೇಕ ರಾಜ್ಯದ ಬೇಡಿಕೆ ಸೂಕ್ತವಲ್ಲ. ಉತ್ತರ ಕರ್ನಾಟಕದ ಸಲುವಾಗಿ ವಿಧಾನಸಭೆ ಒಳ-ಹೊರಗೆ ಹೋರಾಟ ಮಾಡಲಿ. ಅದು ಬಿಟ್ಟು ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ ಎಂದರು.
ಬೇಡ ಜಂಗಮ ಮೀಸಲಾತಿ ಬೇಡ
ಜಂಗಮರನ್ನು ಪೂಜ್ಯರು ಎಂದು ಕರೆಯುತ್ತಾರೆ. ಬೇಡ ಜಂಗಮಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಪಿಸಿಸಿ ಕಥೆ
ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ ವಿಳಂಬವಾಗಿದೆ. ಪಕ್ಷದ ವರಿಷ್ಠರು ಏನು ಮಾಡುತ್ತಾರೆ ಕಾದು ನೋಡಬೇಕಿದೆ. ಈ ವಿಚಾರದಲ್ಲಿ ತಾವು ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.