

ಬೆಂಗಳೂರು: ಜೆಡಿಎಸ್ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. 10-15 ಶಾಸಕರು ಹಾಗೂ 6-7 ಮೇಲ್ಮನೆ ಸದಸ್ಯರು ಪಕ್ಷದ ವರಿಷ್ಠರ ವಿರುದ್ಧ ಕೆಂಡವಾಗಿದ್ದಾರೆ. ಆದರೆ, ಈ ಕೆಂಡ ಬೂದಿ ಮುಚ್ಚಿದಂತಿದ್ದು, ಯಾವಾಗ ಜ್ವಾಲೆಯಾಗಿ ಉರಿವುದೋ ಗೊತ್ತಿಲ್ಲ. ಮೈತ್ರಿ ಸರ್ಕಾರ ಪತನದ ನಂತರ ಅನೇಕರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಧಿಕಾರದಲ್ಲಿದ್ದಾಗ ತಮ್ಮನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು. ಯಾವುದೇ ಹುದ್ದೆ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡದೆ ಕಡೆಗಣಿಸಲಾಯಿತು ಎಂಬ ನೋವು ಅತೃಪ್ತ ಶಾಸಕರಲ್ಲಿ ಮಡುಗಟ್ಟಿದೆ.
ಹಿರಿಯ ಶಾಸಕ ಜಿ.ಟಿ. ದೇವೇಗೌಡ ಸೇರಿ ಕೆಲ ಅತೃಪ್ತರು ತಾಂತ್ರಿಕ ಕಾರಣಗಳಿಂದ ಪಕ್ಷದಲ್ಲಿ ಇದ್ದೂ ಇಲ್ಲದಂತಿದ್ದಾರೆ. ಮತ್ತೆ ಕೆಲವರು ಮುಂದಿನ ರಾಜಕೀಯ ಭವಿಷ್ಯದ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಏಳೆಂಟು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ವರಿಷ್ಠರಿಗೆ ಗೊತ್ತಿಲ್ಲದೇನಿಲ್ಲ.
ಮಧು ಬಂಗಾರಪ್ಪ ಗರಂ: ಮಧು ಬಂಗಾರಪ್ಪ ಹೈಕಮಾಂಡ್ ವಿರುದ್ಧ ಗರಂ ಆಗಿದ್ದಾರೆ. ಅಷ್ಟೆ ಅಲ್ಲದೆ, ಪಕ್ಷದ ವರಿಷ್ಠರು ಮಾಡಿದ ಕೆಲ ಎಡವಟ್ಟುಗಳನ್ನು ಮುಖಕ್ಕೆ ಹೊಡೆದಂತೆ ಹೇಳಿ, ನಾನು ರಾಜೀನಾಮೆ ಕೊಡುವುದಿಲ್ಲ. ಬೇಕಿದ್ದರೆ ನನ್ನನ್ನು ಉಚ್ಚಾಟಿಸಲಿ ಎಂದು ಪರೋಕ್ಷವಾಗಿ ಟಾಟಾ ಹೇಳಿದ್ದಾರೆ. ಪಿಜಿಆರ್ ಸಿಂಧ್ಯಾ ಅಂತರ ಕಾಯ್ದುಕೊಂಡಿದ್ದಾರೆ. ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆಯೆ? ಹೋದರೆ ಹೋಗಲಿ ಎಂಬ ಎಚ್ಡಿಕೆ ಉದಾಸೀನದ ಹೇಳಿಕೆ ಪಕ್ಷದ ಅನೇಕರಲ್ಲಿ ಬೇಸರ ತರಿಸಿದೆ.
ರಮೇಶ್ ಬಾಬು ಜಾತ್ಯತೀತ ಜನತಾದಳಕ್ಕೆ ರಾಜೀನಾಮೆ
ದಾವಣಗೆರೆ: ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಜಾತ್ಯತೀತ ಜನತಾದಳಕ್ಕೆ ರಾಜೀನಾಮೆ ನೀಡಿದ್ದು, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ.
ಪಕ್ಷದ ಪ್ರಾಥಮಿಕ ಸದಸ್ಯತ್ವ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಕ್ತಾರ ಸ್ಥಾನಗಳಿಂದಲೂ ಹೊರಬಂದಿರುವುದಾಗಿ ತಿಳಿಸಿದರು. ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಅನ್ಯಾಯವಾಗಿದೆ. ಈ ಬಗ್ಗೆ ಯಾರನ್ನೂ ದೂರುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಬೇರೆ ಪಕ್ಷಗಳಿಂದ ಅವಕಾಶ ಬಂದರೆ ಮುಂದಿನ ತೀರ್ಮಾನ ಕೈಗೊಳ್ಳುವೆ. 15 ದಿನಗಳ ವರೆಗೆ ಕಾದು ನೋಡುತ್ತೇನೆ ಎಂದು ಹೇಳಿದರು.
ರಾಮನಗರ ಕ್ಷೇತ್ರದಿಂದ ನಿಖಿಲ್?
ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ರಾಮನಗರದಲ್ಲಿ ಭರ್ಜರಿಯಾಗಿ ಮಾಡುವ ‘ಕ್ಷೇತ್ರ ನಾಮಕರಣ’ ಮಾಡಲು ದಳಪತಿಗಳು ವೇದಿಕೆ ರೆಡಿ ಮಾಡುತ್ತಿದ್ದಾರೆ. ‘ನಿಖಿಲ್ ರಾಜಕೀಯ ರಾಮನಗರ ಕ್ಷೇತ್ರದಿಂದ ಪ್ರಾರಂಭವಾಗುತ್ತದೆ’ ಎಂದು ದೇವೇಗೌಡ ಇತ್ತೀಚೆಗೆ ಭವಿಷ್ಯ ನುಡಿದಿದ್ದಾರೆ. ನಿಖಿಲ್ ರಾಜಕೀಯ ಜೀವನ ದೈವದಡಿ ಆಟ, ಜನರ ಒತ್ತಾಯಕ್ಕೆ ನಾವು ಮಣಿಯಲೇಬೇಕು ಎಂದು ಮಾರ್ವಿುಕ ಮಾತುಗಳನ್ನಾಡಿದ್ದಾರೆ.
ಕುಟುಂಬದವರೇ ಕಣಕ್ಕೆ: 2023ರ ವಿಧಾನಸಭಾ ಚುನಾವಣೆ ಯಲ್ಲಿ ಗೌಡರ ಕುಟುಂಬದ ಇನ್ನೂ ಕೆಲವರು ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ರೇವಣ್ಣ ಪತ್ನಿ ಭವಾನಿ ರೇವಣ್ಣ, ಪುತ್ರ ಡಾ.ಸೂರಜ್ ರೇವಣ್ಣ ಕೂಡ ಕಣಕ್ಕಿಳಿಯುವ ಮಾತಿದೆ.
ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಜಿ.ಟಿ.ದೇವೇಗೌಡರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ವರಿಷ್ಠರು ನಿರ್ಧರಿಸುವರು. | ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ರಮೇಶ್ ಬಾಬು ರಾಜೀನಾಮೆಯಿಂದ ಏನು ತೊಂದರೆ ಆಗಿದೆ? ಅವರಿಗೆ ಅಧಿಕಾರ ಕೊಟ್ಟರೆ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಚೆನ್ನಾಗಿ ಇರಲ್ಲ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ