ಕೈಗಾರಿಕೆ ಇಲಾಖೆ ಜಂಟಿ‌ ನಿರ್ದೇಶಕ ಸಿದ್ದಣ್ಣ ಎಸಿಬಿ ಬಲೆಗೆ

IMG-20210112-WA0123
Published on

ವಿಜಯಪುರ: ಸರ್ಕಾರದ ಸಬ್ಸಿಡಿ ಹಣ ಮಂಜೂರು ಮಾಡಿಸಲು 1.45 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ದಣ್ಣ ಟಿ‌. ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮಂಗಳವಾರ ಸಂಜೆ 7.40 ರ ಸುಮಾರಿಗೆ ಎಸಿಬಿ ಕಾರ್ಯಾಚರಣೆ ಯಲ್ಲಿ ಸಿದ್ದಣ್ಣ ಸಾಕ್ಷ ಸಮೇತ ಸಿಕ್ಕಿ ಬಿದ್ದಿದ್ದು ಇವರಿಂದ ಲಂಚದ ಹಣ ವಸೂಲಿ ಮಾಡಿಕೊಂಡು ದೂರು ದಾಖಲಿಸಲಾಗಿದೆ.

ಘಟನೆ ವಿವರ: ಜಿಲ್ಲಾ ಕೈಗಾರಿಕಾ ಕೇಂದ್ರ (ಕೆಐಎಡಿಬಿ)ದ ವ್ಯಾಪ್ತಿಯಲ್ಲಿ ವಿಜಯಕುಮಾರ್ ಮನ್ನೂರ ಅವರು ತಮ್ಮ ಪತ್ನಿ ಹೆಸರಿನಲ್ಲಿ ಮೆ. ನಂದಿ ಅಗ್ರೊ‌ ಫುಡ್ ಇಂಡಸ್ಟ್ರೀಸ್ (ಶುದ್ದ ಕುಡಿಯುವ ನೀರಿನ ಘಟಕ) ಖರೀದಿ ಮಾಡಿದ್ದಾರೆ. ಸಂಗನಗೌಡ ಪಾಟೀಲ ಎಂಬುವರಿಂದ ಖರೀದಿಸಿದ್ದು ಇದರ ಮೇಲೆ 20.87 ಲಕ್ಷ ರೂ. ಸರ್ಕಾರದಿಂದ ಸಾಲ ಮಂಜೂರಾಗಿದೆ. ಸದರಿ ಸಾಲ ನೀಡುವ ಬ್ಯಾಂಕ್ ಗೆ ಸಿದ್ದಣ್ಣ ಸಾಲ ನೀಡದಂತೆ ಪತ್ರ ಬರೆದಿದ್ದಾರೆ. ಅಲ್ಲದೇ ತಮಗೆ ಲಂಚ ನೀಡುವಂತೆ ಸತಾಯಿಸಿದ್ದಾರೆ. ಇದರಿಂದ ಬೇಸತ್ತ ಮನ್ನೂರ ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮೇಗೌಡ ಅವರ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಉಪಾಧೀಕ್ಷಕ ಎಂ.ಕೆ.‌ಗಂಗಲ‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸಾಕ್ಷ ಸಮೇತ ಬಂಧಿಸಿದೆ. ತಂಡದಲ್ಲಿ ಹರಿಶ್ಚಂದ್ರ, ಪಿ.ಜಿ. ಕವಟಗಿ, ಮಹೇಶ ಪೂಜಾರಿ, ಅಶೋಕ ಸಿಂಧೂರ, ಸುರೇಶ ಜಾಲಗೇರಿ, ಸದಾಶಿವ ಕೋಟ್ಯಾಳ, ಮಾಳಪ್ಪ ಸಲಗೊಂಡ ಮತ್ತಿತರರಿದ್ದರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net