

ತುಮಕೂರು
ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ 2022ನೇ ಸಾಲಿನ ‘ಸಿದ್ಧಗಂಗಾಶ್ರೀ ಪ್ರಶಸ್ತಿ’ ಖ್ಯಾತ ಹೃದ್ರೋಗ ತಜ್ಞ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಭಾಜನರಾಗಿದ್ದಾರೆ.
2021ನೇ ಸಾಲಿಗೆ ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಜಿಲ್ಲೆಯ ಅಥಣಿಯ ಮೋಟಗಿ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಪ್ರಭು ಚನ್ನಬಸವಸ್ವಾಮಿಗಳನ್ನು ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ‘ಸಿದ್ಧಗಂಗಾ ಶಿವಕುಮಾರಶ್ರೀ ಪ್ರಶಸ್ತಿಯನ್ನು ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಕೃಷಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಪರಿಗಣಿಸಿ ನಾಲ್ವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಈ ಸಾಲಿನಲ್ಲಿ ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಚಂದ್ರಶೇಖರ ಬಿಲಗುಂದಿ, ಮೈಸೂರಿನ ಸಾಹಿತಿ ಪ್ರೊ. ಎಸ್. ಮಲೆಯೂರು ಗುರುಸ್ವಾಮಿ, ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರು ಡಾ. ವೈ.ಸಿ. ಕಮಲ, ರಾಯಚೂರಿನ ಕೃಷಿತಜ್ಞರಾದ ಕವಿತಾ ಮಿಶ್ರಾ ಭಾಜನರಾಗಿದ್ದಾರೆ. ಪ್ರಶಸ್ತಿಯು 15,000 ರೂ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಅಂತೆಯೇ ‘ಕಾಯಕಯೋಗಿ ಪ್ರಶಸ್ತಿಯು ಸಾಹಿತಿ, ಪತ್ರಕರ್ತರಾದ ಧಾರವಾಡ ರಂಜಾನ್ ದರ್ಗಾಗೆ ಸಂದಿದೆ. ಡಿ.18 ರಂದು ಶ್ರೀಮಠದಲ್ಲಿ ನಡೆಯುವ ಹಳೆಯ ವಿದ್ಯಾರ್ಥಿಗಳ 66ನೇ ಸರ್ವಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.