

ಕನಕಪುರ : ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ತುಮಕೂರು ಸಿದ್ದಗಂಗಾ ಮಠದ ತ್ರಿದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಗರದ ರೋಟರಿ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ರೋಟರಿ ಸಂಸ್ಥೆ ಬಿ.ಜಿ.ಎಸ್ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆಯಲ್ಲಿ 862 ಮಂದಿ ತಪಾಸಣೆಗೆ ಒಳಗಾದರು, 76 ಮಂದಿಗೆ ಇ.ಸಿ.ಜಿ, 55 ಮಂದಿ ಶಸ್ತ್ರ ಚಿಕಿತ್ಸೆ ಹಾಗೂ 18 ಮಂದಿಗೆ ಕಣ್ಣಿನ ಪೊರೆ ಶಸ್ತ್ರಿಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಗೆ ಒಳಗಾದ ಎಲ್ಲರನ್ನು ಬಸ್ಸಿನಲ್ಲಿ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಲಾಯಿತು.
ಬಿ.ಜಿ.ಎಸ್ ಆಸ್ಪತ್ರೆಯ ಮುಖ್ಯ ವೈದ್ಯ ಡಾ.ನಂದೀಶ್ ಮಾತನಾಡಿ, ರೋಟರಿ ಹಾಗೂ ವೀರಶೈವ ಮಹಾಸಭಾ ವೇದಿಕೆ ಹಿರಿಯ ಮಹಾಚೇತನ ಸ್ವಾಮಿಗಳ ಹೆಸರಿನಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ, ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ವಿದ್ಯಾಕಾಶಿಯನ್ನಾಗಿ ಮಾಡಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಉಮಾಶಂಕರ್ ಮಾತನಾಡಿ, ಆದಿಚುಂಚನಗಿರಿ ಹಾಗೂ ಸಿದ್ದಗಂಗಾ ಮಠಗಳು ವಿಶ್ವದ ಭೂಪಟದಲ್ಲಿ ಮುಂಚೂಣಿಯ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ, ಇಬ್ಬರು ಸ್ವಾಮೀಜಿ ಹಿಂದು ಸಂಸ್ಕೃತಿಯ ಮೂರ್ತ ರೂಪವಾಗಿದ್ದಾರೆ. ಧಾರ್ಮಿಕ, ಸಾಮಾಜಿಕ , ಸಾಂಸ್ಕೃತಿ, ಶೈಕ್ಷಣಿ, ಆಧ್ಯಾತ್ಮಕ ಶಕ್ತಿ ಕೇಂದ್ರವನ್ನಾಗಿ ಮಾಡುವಲ್ಲಿ ಮಹತ್ತರ ಜವಾಬ್ದಾರಿಯನ್ನು ಹೊಂದಿದವರಾಗಿದ್ದರು, ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿದ್ದು, ಇವರ ಸೇವೆ ಅವಿಸ್ಮರಣೀಯವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಜಯಶಂಕರ್, ಮಾಜಿ ಅಧ್ಯಕ್ಷ ಭಾನುಪ್ರಕಾಶ್, ಪುಟ್ಟಸ್ವಾಮಿ, ಪದಾಧಿಕಾರಿಗಳಾದ ದೇಸಾಯಿ, ನಟೇಶ್, ಚಂದ್ರಪ್ರಭ, ಸುನೀಲ್, ಪ್ರಕಾಶ್ ಸೇರಿ ವೀರಶೈವ ಮಹಾಸಭಾ ಪದಾಧಿಕಾರಿಗಳು, ಬಿಜಿಎಸ್ ಆಸ್ಪತ್ರೆಯ ವಿವಿಧ ವೈದ್ಯರು, ಸಿಬ್ಬಂದಿ ಹಾಜರಿದ್ದರು.