

ತುಮಕೂರು: ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂದ ವತಿಯಿಂದ ಕೊಡಮಾಡುವ "ಸಿದ್ದಗಂಗಾ ಶಿವಕುಮಾರಶ್ರೀ' ಪ್ರಶಸ್ತಿಗೆ ಮೈಸೂರಿನ ಎಚ್.ಟಿ.ಶೈಲಜಾ ಹಾಗೂ ತುಮಕೂರಿನ ಜಿ.ಎನ್.ಬಸವರಾಜಪ್ಪ ಭಾಜನರಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಜ.21ರಂದು ಮಧ್ಯಾಹ್ನ 3ಕ್ಕೆ ಶ್ರೀಮಠದಲ್ಲಿ ನಡೆಯುವ ಸಂದ 68ನೇ ಸರ್ವಸದಸ್ಯರ ಸಭೆಯಲ್ಲಿ ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶೈಲಜಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಸವರಾಜಪ್ಪಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯವಹಿಸಲಿದ್ದು ಕಿರಿಯಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಸಂಘಸಿರಿ ಪ್ರಶಸ್ತಿ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಂದ ಹಳೆಯ ವಿದ್ಯಾರ್ಥಿಗಳಿಗೆ ಸಂಘಸಿರಿ ಪ್ರಶಸ್ತಿ ಮಾಡಲಾಗುತ್ತಿದ್ದು ಬೆಂಗಳೂರಿನ ಎಸ್.ಶಿವಾನಂದಶರ್ಮ,ಎಸ್.ಆರ್.ರೇಣುಕಾರಾಧ್ಯ, ವೆಂಕಟೇಗೌಡ, ಚಾಮರಾಜನಗರದ ಮುಳ್ಳೂರಿನ ಶಿವಕುಮಾರಮೂರ್ತಿ ಹಾಗೂ ಬಾಸೂರಿನ ಬಿ.ಎಂ.ಪರಮೇಶ್ವರಪ್ಪ (ಮರಣೋತ್ತರ)ಗೆ ಸಂಘಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.