

ಬೈಲುಕುಪ್ಪೆ:ಸರಳ ರಕ್ತ ಪರೀಕ್ಷೆಯಿಂದ ಸಿಕಲ್ ಸೆಲ್ ಕಾಯಿಲೆ ಪತ್ತೆ ಹಚ್ಚಬಹುದು. 40 ವರ್ಷದ ಒಳಗಿನವರು ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲತಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚದೇವನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಧರ್ತಿ ಆಬಾ ಜನ ಭಾಗಿದಾರಿ ಅಭಿಯಾನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಸಿಕಲ್ ಸೆಲ್ ಕಾಯಿಲೆಯಲ್ಲಿ ಕೆಂಪು ರಕ್ತ ಕಣಗಳು ಕುಡುಗೋಲು ಆಕಾರಕ್ಕೆ ತಿರುಗುತ್ತವೆ. ಇದು ಒಂದು ಅನುವಂಶಿಕ ಕಾಯಿಲೆ. ಪದೇ ಪದೆ ಜ್ವರ ಬರುವುದು, ತೀವ್ರ ಮೂಳೆ ನೋವು, ಹೊಟ್ಟೆ ನೋವು, ಆಗಾಗ ಕಾಮಾಲೆ ರೋಗ, ಶರೀರದಲ್ಲಿ ವಾಸಿಯಾಗದ ಹುಣ್ಣುಗಳು ರಕ್ತ ಹೀನತೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಒಂದು ಸರಳ ರಕ್ತ ಪರೀಕ್ಷೆಯಿಂದ ಈ ಕಾಯಿಲೆಯನ್ನು ಕಂಡು ಹಿಡಿಯಬಹುದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕಾಡಿನಲ್ಲಿ ವಿವಿಧ ಜಾತಿಯ ಮರ ಗಿಡಗಳಲ್ಲಿ ಬಿಟ್ಟ ಹಣ್ಣುಗಳನ್ನು ಪಕ್ಷಿ ಮತ್ತು ಕಾಡುಪ್ರಾಣಿ ತಿಂದು ಎಂಜಲಾಗಿರುತ್ತದೆ. ಅದನ್ನು ಜನರು ಸೇವಿಸುವುದರಿಂದ ಈ ಕಾಯಿಲೆ ಬರುವ ಸಂಭವ ಇದೆ. ಕಾಡಂಚಿನ ಪ್ರದೇಶದಲ್ಲಿರುವ ಗಿರಿಜನರನ್ನು ನಮ್ಮ ಇಲಾಖೆಯಿಂದ ಕಡ್ಡಾಯವಾಗಿ ಪರೀಕ್ಷಿಸುತ್ತೇವೆ. ಇದರಲ್ಲಿ ಪಾಸಿಟಿವ್ ಬಂದಿರುವುದು ತುಂಬ ಕಡಿಮೆ. ಮಂಚದೇವನಹಳ್ಳಿ ಗ್ರಾಮದಲ್ಲೂ ನಮ್ಮ ಇಲಾಖೆ ವತಿಯಿಂದ 40 ಜನಕ್ಕೂ ಹೆಚ್ಚು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.
ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಚಂದು, ಆಹಾರ ಇಲಾಖೆ ನೌಕರ ಕಿರಣ್, ಗಿರಿಜನರ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಯಶೋದಮ್ಮ ಮತ್ತು ಸಿದ್ದಲಿಂಗ ಶೆಟ್ಟಿ, ಶಶಿಧರ, ಮಧುರಾ, ಸುಶೀಲಾ, ಆಶಾ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೃಷ್ಣ, ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.