

ಚನ್ನಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.
ರಥೋತ್ಸವದ ಅಂಗವಾಗಿ ಶನಿವಾರ ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. 11.55ರ ಶುಭ ಅಭಿಜಿನ ಲಗ್ನದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತರು ರಥವನ್ನು ದೇವಸ್ಥಾನದ ಆವರಣದ ಸುತ್ತಲ್ಲೂ ಎಳೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಇನ್ನು ರಥಕ್ಕೆ ಹಣ್ಣು ಜವನ ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ರಥೋತ್ಸವ ಪ್ರಯುಕ್ತ ಶ್ರೀ ಕೆಂಗಲ್ ಆಂಜನೇಯಸ್ವಾಮಿಗೆ ವಿಶೇಷ ಹೂನಂಗಿ ಅಲಂಕಾರ ಮಾಡಲಾಗಿತ್ತು. ದೇಗುಲದ ಆವರಣವನ್ನು ಹೂ, ಹಣ್ಣು ಹಾಗೂ ವಿವಿಧ ತರಕಾರಿಗಳಿಂದ ಅಲಂಕರಿಸಲಾಗಿತ್ತು. ಜಿಲ್ಲಾಧಿಕಾರಿ ಯಶವಂತ್‌ವಿ ಗುರುಕರ್, ಶಾಸಕ ಸಿ.ಪಿ.ಯೋಗೇಶ್ವರ್, ಎಡಿಸಿ ಚಂದ್ರಯ್ಯ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿ.ಬಿ.ಚಂದ್ರಯ್ಯ ಸೇರಿ ಅಧಿಕಾರಿಗಳು ಹಾಗೂ ವಿವಿಧ ಮುಖಂಡರು ಹಾಗೂ ಭಕ್ತರು ಭಾಗಿಯಾದರು.