

ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ಸಂಜೆ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಿಗೆ ಸಪ್ತಮಾತೃಕಾ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ನಂತರ ದೇವಾಲಯ ಆವರಣದಲ್ಲಿ ನಡೆದ ಉಧ್ವಾರ್ಚನೆ ಸುಗ್ಗಿ ಕುಣಿತ ನಡೆಸಲಾಯಿತು. ಸುತ್ತಮುತ್ತಲ ಸುಮಾರು 48 ಗ್ರಾಮಗಳ ಜನರು ಭಾಗವಹಿಸಿ ಕುಣಿದು ಕುಪ್ಪಳಿಸಿ ದೇವಿ ಕೃಪೆಗೆ ಪಾತ್ರರಾದರು.
ಬುಧವಾರ ಬೆಳಗ್ಗೆ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಸುಮಾರು ಎರಡು ಗಂಟೆ ನಡೆದ ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಈಡುಗಾಯಿ ಹಾಕುವುದು ವಿಶೇಷವಾಗಿತ್ತು. ಮೆರವಣಿಗೆ ದೇವಸ್ಥಾನದ ಬಳಿ ಬಂದ ನಂತರ, ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿ ವಿಧಾನಗಳು ನಡೆದೆವು ಮಧ್ಯಾಹ್ನ 1.30ಕ್ಕೆ ಮಹಾ ಮಂಗಳಾರತಿ ನೆರವೇರಿಸಿ ದೇವಸ್ಥಾನದ ಸುತ್ತ ಬಲಿ ಅನ್ನ ಹಾಕಲಾಯಿತು.
ನಂತರ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ವಾದ್ಯಗೋಷ್ಠಿ ಮೂಲಕ ಕರೆತಂದು ಮಧ್ಯಾಹ್ನ 2.30 ಗಂಟೆಗೆ ಕೆಂಡೋತ್ಸವ ನಡೆಸಲಾಯಿತು. ನಂತರ ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ಒಂದು ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲಾಧಿಕಾರಿ ಸತ್ಯಭಾಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ನಂದಕುಮಾರ್, ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
12ರ ವರೆಗೆ ಬಾಗಿ ಬಂದ್: ನವೆಂಬರ್ 7ರಿಂದ12 ವರೆಗೆ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನಂತರ ನವೆಂಬರ್ 13ರ ಬುಧವಾರದಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ ಅಂದು ಬಾಗಿಲು ತೆರೆಯುವ ಜಾತ್ರೆಯನ್ನು ಆಚರಿಸಲಾಗುವುದು.ತ್ಸವಕ್ಕೆ ಚಾಲನೆ ನೀಡಲಾಯಿತು.