

ಬೆಂಗಳೂರು ಮಾಧ್ಯಮ ಕ್ಷೇತ್ರವು ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಇಂದಿಗೂ ವೃತ್ತಿಪರರ ಕೊರತೆಯನ್ನು ಎದುರಿಸುತ್ತಿದೆ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಮೀಡಿಯಾ ಸ್ಪಿಯರ್- 2024, ಭಾರತೀಯ ಮಾಧ್ಯಮ ಉದ್ಯಮದ ರೂಪಾಂತರ ರಾಷ್ಟ್ರೀಯ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕೌಶಲ, ಸಂವಹನದ ಕೊರತೆ ಕಾಡುತ್ತಿದೆ. ದೇಶದ ಮುಖ್ಯವಲಯದಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಹೆಚ್ಚಿಸುವ ಪಾತ್ರ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಮಾಧ್ಯಮ ಸಾಕ್ಷರತೆ ಕೋರ್ಸ್ ಆರಂಭ:
‘ಮಾಧ್ಯಮ ಸಾಕ್ಷರತೆ ಹಾಗೂ ಸಂವಹನ ಪ್ರಾಮುಖ್ಯತೆ’ ಕುರಿತಾದ ಕೋರ್ಸ್‌ಗಳನ್ನು ಪರಿಚಯಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವು ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾಧ್ಯಮ ಸಾಕ್ಷರತೆ ಮತ್ತು ಸಂವಹನ ಜ್ಞಾನ ಕೂಡ ಪ್ರಮುಖ ಕೌಶಲವಾಗಿದ್ದು, ವಿದ್ಯಾರ್ಥಿಗಳ ಪಠ್ಯಶಿಕ್ಷಣ ಕ್ರಮದಲ್ಲಿ ಮಾಧ್ಯಮ ಜ್ಞಾನವನ್ನು ಕೂಡ ವಿಷಯವಾಗಿ ಸೇರ್ಪಡಿಸಲಾಗುವುದು ಎಂದರು.
19070-80ರ ದಶಕದ ಬಳಿಕ ಮಾಧ್ಯಕ್ಷ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದಶಕಗಳ ಹಿಂದೆ ನಿರ್ದಿಷ್ಟ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳಲು ಅಷ್ಟೇ ಸೀಮಿತವಾಗಿದ್ದ ಮಾಧ್ಯಮ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ದೇಶದ ಆರ್ಥಿಕತೆಯ ಪ್ರಮುಖ ವಲಯವಾಗಿ ಮಾಧ್ಯಮ ನಿಂತಿದೆ. ಜಿಡಿಪಿ ಏರಿಕೆಗೆ ಹಾಗೂ ಮನರಂಜನೆಗೆ ಮಾಧ್ಯಮ ಕ್ಷೇತ್ರಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ, ಬೆಂ.ವಿವಿ ಕುಲಸಚಿವ ಶೇಕ್ ಲತ್ೀ, ಮೌಲ್ಯಮಾಪನ ಕುಲಸಚಿವ ಪ್ರೊ. ಶ್ರೀನಿವಾಸ್ ಸಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಬಿ. ಶೈಲಶ್ರೀ ಸೇರಿ ದೇಶದ ವಿವಿಧ ವಿಭಾಗಗಳಿಂದ ಆಗಮಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ದೇಶದಲ್ಲಿ ದೂರದರ್ಶನ ಉದ್ಯಮದ ಬೆಳವಣಿಗೆಗೆ ಬೆಂ. ವಿವಿ ಸಂವಹನ ವಿಭಾಗದ ಪಾತ್ರವಿದೆ. ಮಾಧ್ಯಮ, ರೇಡಿಯೋ, ಸಿನಿಮಾ, ದೂರದರ್ಶನ, ಸಾರ್ವಜನಿಕ ಸಂಪರ್ಕ ಕ್ಷೇತ್ರ,ಸಂಶೋಧನೆ ಸೇರಿ ಅನೇಕ ರಂಗಗಳಿಗೆ ಬೆಂ. ವಿವಿ ಸಂವಹನ ವಿಭಾಗ ಕೊಡುಗೆ ನೀಡಿದೆ. -ಪ್ರೊ.ಬಿ.ಕೆ. ರವಿ, ಕೊಪ್ಪಳ ವಿವಿ ಕುಲಪತಿ