

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಉಡುಪಿ ಜಿಲ್ಲಾದ್ಯಂತ ಮುಂಗಾರು ಮಳೆ ಸುರಿಯುತ್ತಿದ್ದಂತೆ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಕೃಷಿಕರು ಗದ್ದೆಗಿಳಿದು ಕೃಷಿ ಕಾರ್ಯಕ್ಕೆ ಬೇಕಾಗಿರುವ ತಯಾರಿಯಲ್ಲಿ ತೊಡಗಿಕೊಂಡಿದ್ದರೂ ಈ ಬಾರಿ ಕೂಲಿಯಾಳುಗಳ ಕೊರತೆಯಿಂದ ಕೃಷಿ ಚಟುವಟಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.
ಉಡುಪಿ, ಕುಂದಾಪುರ, ಕಾಪು, ಕಾರ್ಕಳ, ಹೆಬ್ರಿ, ತಾಲೂಕುಗಳನ್ನು ಒಳಗೊಂಡು ಉಡುಪಿ ಜಿಲ್ಲಾದ್ಯತ 36,509 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಾರ್ಯಕ್ಕೆ ಕೃಷಿಕರು ತಯಾರಿ ನಡೆಸುತ್ತಿದ್ದು, ಗದ್ದೆಗೆ ಗೊಬ್ಬರ ಹಾಕಿ ಉಳುಮೆ ಕಾರ್ಯಕ್ಕೆ ಮುಂದಾಗಿದ್ದರೂ ಗ್ರಾಮೀಣ ಭಾಗದಲ್ಲಿ ಸರಿಯಾದ ಕೂಲಿಯಾಳುಗಳು ಸಿಗದೆ ಕೃಷಿ ಕಾರ್ಯ ನಿಧಾನಗತಿಯಲ್ಲಿ ಸಾಗುವಂತಾಗಿದೆ.
ಈ ಕೃಷಿ ಚಟುವಟಿಕೆಗಳನ್ನು ಮಾಡಲು ಗ್ರಾಮೀಣ ಭಾಗದಲ್ಲೇ ಕೂಲಿಯಾಳುಗಳು ಸಿಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಗದ್ದೆಯಲ್ಲಿ ನಾಟಿ, ಗೊಬ್ಬರ ಹಾಕಲು ಸೇರಿ ಕೂಲಿ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ಉಮೇದು ತೋರುತ್ತಿಲ್ಲ. ಅದಕ್ಕಾಗಿ ಕೃಷಿಕರು ಕೃಷಿ ಮಾಡಲು ಬಾಗಲಕೋಟೆ, ವಿಜಯಪುರ, ಒಡಿಶಾ ಸೇರಿದಂತೆ ವಿವಿಧೆೆಡೆಗಳಿಂದ ಕಾರ್ಮಿಕರನ್ನು ತರಿಸಿ ಕೃಷಿ ಚಟುವಟಿಕೆ ಮಾಡಬೇಕಾದ ಅನಿವಾರ್ಯತೆ ಇದೆ.
ಒಂದೆಡೆ ಕೂಲಿಯಾಳುಗಳ ಅಲಭ್ಯತೆಯಾದರೆ ಮತ್ತೊಂದು ಕಡೆ ಕೂಲಿ ಕಾರ್ಮಿಕರ ಸಂಬಳವೂ ಹೆಚ್ಚಳವಾಗಿದೆ. ಕೃಷಿ ಕೂಲಿಯಾಳುಗಳಿಗೆ ನಿತ್ಯ ಕೂಲಿಗಾಗಿ ಊಟದ ಜತೆಯಲ್ಲಿ 700ರಿಂದ-850 ರೂ.ವರೆಗೆ ದಿನಗೂಲಿ ನೀಡಬೇಕಾಗಿದೆ. ಅದರಲ್ಲೂ ಕೃಷಿ ಋತುವಿನಲ್ಲಿ ಕೂಲಿಯಾಳುಗಳ ಲಭ್ಯತೆಯೇ ಕಡಿಮೆ. ಗ್ರಾಮೀಣ ಭಾಗದಲ್ಲಿ ಕೃಷಿಕರು ದೂರದ ಊರಿನಿಂದ ಕೂಲಿಯಾಳುಗಳನ್ನು ತಂದರೂ ದುಪ್ಪಟ್ಟು ಸಂಬಳ ನೀಡಬೇಕಾದ ಸ್ಥಿತಿಯಿದೆ. ಹೀಗಾಗಿ ಕೃಷಿಯ ಲಾಭಕ್ಕಿಂತ ದುಪ್ಪಟ್ಟು ಹಣವನ್ನು ಕೂಲಿಯಾಳುಗಳಿಗೆ ವ್ಯಯಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಕೆಲವೊಂದು ಗ್ರಾಮೀಣ ಭಾಗದ ಸಣ್ಣ ರೈತರು ಕೂಲಿಯಾಳುಗಳ ಕೊರತೆಯಿಂದ ಕೃಷಿ ಭೂಮಿಯನ್ನು ಹಡಿಲು ಬಿಡುವಂತಾಗಿದೆ.
ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆ ಚುರುಕು ಪಡೆದರೂ ಸರಿಯಾದ ಕೂಲಿಯಾಳುಗಳು ಸಿಗದೆ ಕೃಷಿ ಕೆಲಸಗಳು ನಿಧಾನಗತಿಯಲ್ಲಿ ನಡೆಯುವಂತಾಗಿದೆ. ಊರಿನಲ್ಲಿ ಕೆಲಸಕ್ಕೆ ಜನ ಸಿಗದೆ ದುಪ್ಪಟ್ಟು ಸಂಬಳ ನೀಡಿ ಹೊರಜಿಲ್ಲೆಯ ಕೂಲಿ ಕಾರ್ಮಿಕರನ್ನು ಕರೆಸಿಕೊಂಡು ಕೃಷಿಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗಿದೆ.-ವಸಂತ್ ಕುಮಾರ್, ಪ್ರಗತಿಪರ ಕೃಷಿಕ
ನಮ್ಮದು ಕೃಷಿ ಕುಟುಂಬ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಕೂಲಿಯಾಳುಗಳನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದೇವೆ. ಈಗಿನ ಆಧುನಿಕ ಯಂತ್ರೋಪಕರಣಗಳು ಇದ್ದರೂ ಎತ್ತರದ ಪ್ರದೇಶಗಳಲ್ಲಿ ವಾಹನಗಳು ಸಂಚಾರ ಕಷ್ಟ ಸಾಧ್ಯ. ಕೂಲಿಯಾಳುಗಳು ಸಿಗದೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ.-ಪ್ರವೀಣ್ ಶೆಟ್ಟಿ ಸಾಣೂರು, ಕೃಷಿಕ