ಹೆದ್ದಾರಿಗೆ ತಾಗಿಕೊಂಡಿದೆ ವಿದ್ಯುತ್ ಕಂಬ :ತೆರವಿಗೆ ಸ್ಥಳೀಯರ ಆಗ್ರಹ ; ಸಮಸ್ಯೆಗೆ ಸ್ಪಂದಿಸದ ಮೆಸ್ಕಾಂ

2 Min Read
elecricity pole
ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಪರಿಸರದಲ್ಲಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಅಪಾಯಕಾರಿ ವಿದ್ಯುತ್ ಕಂಬ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳದಿಂದ ಹೆಬ್ರಿ ಸಾಗುವ ರಾಜ್ಯ ಹೆದ್ದಾರಿ 1ರಲ್ಲಿ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸಮೀಪದಲ್ಲಿ ವಿದ್ಯುತ್ ಕಂಬದ ಸ್ಟೇ ವೈಯರ್ ರಾಜ್ಯ ಹೆದ್ದಾರಿಯ ಒಂದು ಅಡಿ ಅಂತರದಲ್ಲೆ ಪಕ್ಕದಲ್ಲೇ ಇದ್ದು ಅಪಾಯಕಾರಿಯಾಗಿದ್ದು, ವಾಹನ ಸವಾರರು ಸ್ವಲ್ಪ ಎಡವಿದರೂ ಅನಾಹುತ ಸೃಷ್ಟಿಸುವಂತಿದೆ.
ಕಳೆದ ವರ್ಷ ರಾಜ್ಯ ಹೆದ್ದಾರಿ 1ರ ಎಣ್ಣೆಹೊಳೆ ಸೇತುವೆಯಿಂದ ನೆಲ್ಲಿಕಟ್ಟೆ ಚಿಕ್ಕಲ್ಬೆಟ್ಟುವರೆಗೆ ರಸ್ತೆ ವಿಸ್ತರಣೆಗೊಳಿಸಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ರಸ್ತೆ ವಿಸ್ತರಣೆ ಸಂದರ್ಭ ಈ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬದ ಸ್ಟೇ ವೈಯರನ್ನು ಇಲಾಖೆ ತೆರವುಗೊಳಿಸಿಲ್ಲ. ಹೀಗಾಗಿ ಹೆದ್ದಾರಿಗೆ ತಾಗಿಕೊಂಡೆ ಅಪಾಯಕಾರಿಯಾಗಿರುವ ಸ್ಟೇ ವೈಯರ್ ಹಾಗೂ ವಿದ್ಯುತ್ ಕಂಬಗಳು ನಿತ್ಯ ಅನಾಹುತಕ್ಕೆ ಎಡೆ ಮಾಡಿಕೊಡುವಂತಿದೆ. ಈಗಾಗಲೇ ಈ ಭಾಗದಲ್ಲಿ ಸಾಕಷ್ಟು ಅಪಘಾತ ನಡೆದ ನಿದರ್ಶನವೂ ಇಲ್ಲಿದೆ.

ವಾಹನ ಸವಾರರಿಗೆ ಸಂಕಟ

ಈ ಭಾಗದ ರಸ್ತೆಯಲ್ಲಿ ನಿತ್ಯ ನೂರಾರು ವಾಹನ ಸಂಚಾರ ನಡೆಸುತ್ತಿದ್ದು, ಕೆಲವೊಂದು ಬಾರಿ ವಾಹನಗಳು ಎದುರು ಬದುರುಗೊಳ್ಳುವ ಸಂದರ್ಭ ವಿದ್ಯುತ್ ಕಂಬ ಹಾಗೂ ಸ್ಟೇ ವೈಯರ್‌ಗಳ ಸಮಸ್ಯೆಯಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಪಾದಚಾರಿಗಳು ಕೆಲವೊಂದು ಸಂದರ್ಭ ವಿದ್ಯುತ್ ಸ್ಟೇ ವೈಯರ್‌ನಿಂದ ಎಡವಟ್ಟು ಮಾಡಿಕೊಂಡು ಬೀಳುವ ಸ್ಥಿತಿಯೂ ಇದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಂತೂ ಸ್ವಲ್ಪ ಎಡವಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಈಗಾಗಲೇ ಈ ರಸ್ತೆಯಲ್ಲಿ ಅನೇಕ ಬಾರಿ ರಸ್ತೆ ಅಪಘಾತ ನಡೆದ ವರದಿಯಾಗಿವೆ. ಮೂರು ದಿನಗಳಲ್ಲಿ ಮೂರು ಬೈಕ್‌ಗಳು ಅಪಘಾತಕ್ಕೀಡಾಗಿವೆ. ವೇಗವಾಗಿ ಬರುವ ಭಾರಿ ವಾಹನಗಳು, ಕಾರುಗಳು ವಿದ್ಯುತ್ ಕಂಬದ ಸ್ಟೇ ವೈಯರ್‌ಗೆ ಸಿಲುಕಿ, ಜತೆಗೆ ಅದರ ಇನ್ನೊಂದು ಪಾಶ್ವದಲ್ಲಿರುವ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಗುದ್ದಿದರೆ ಅಪಾಯ ತಪ್ಪಿದಲ್ಲ. ಇದರಿಂದ ಸ್ಥಳೀಯರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ಸಹಜ ಸ್ಥಿತಿಯತ್ತ ಸಾರಿಗೆ ಸಂಚಾರ

ಹಣ ಮೀಸಲಿಟ್ಟಿಲ್ಲ

ರಾಜ್ಯ ಹೆದ್ದಾರಿ ವಿಸ್ತರಣೆ ಸಂದರ್ಭ ವಿದ್ಯುತ್ ಕಂಬ ತೆರವುಗೊಳಿಸಲು ಮೆಸ್ಕಾಂಗೆ ಸೂಕ್ತವಾದ ನಿಗದಿತ ಮೊತ್ತ ಕಟ್ಟಬೇಕಿತ್ತು. ಆದರೆ ಪಿಡಬ್ಲುೃಡಿ ಇಲಾಖೆ ಮೆಸ್ಕಾಂಗೆ ಯಾವುದೇ ಮೊತ್ತ ಸಲ್ಲಿಕೆ ಮಾಡಿಲ್ಲ. ಇದರಿಂದಾಗಿ ಹಣ ಮೀಸಲಿಡದೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಗಳು, ಹಾಗೂ ಸ್ಟೇ ವೈಯರ್ ಕಂಬವು ತೆರವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.

ರಸ್ತೆ ವಿಸ್ತರಣೆ ಸಂದರ್ಭ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಸಾಮಾನ್ಯ. ಆದರೆ ಇಲ್ಲಿ ರಸ್ತೆ ಅಗಲೀಕರಣಗೊಂಡು ಹಲವು ಸಮಯ ಕಳೆದರೂ ಕಂಬಗಳ ತೆರವು ಕಾರ್ಯ ಮಾತ್ರ ನಡೆದಿಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಅಪಾಯಕಾರಿ ಕಂಬ, ಸ್ಟೇ ವೈಯರ್‌ಗಳನ್ನು ಕೂಡಲೇ ತೆರವುಗೊಳಿಸಿ ನಡೆಯಬಹುದಾದ ಅನಾಹುತ ತಪ್ಪಿಸಬೇಕಾಗಿದೆ.
-ಪುರುಷೋತ್ತಮ್ ಸ್ಥಳೀಯರು

ರಸ್ತೆ ವಿಸ್ತರಣೆ ಸಂದರ್ಭ ವಿದ್ಯುತ್ ಕಂಬಗಳ ತೆರವು ಕಾರ್ಯ ಮಾಡಬೇಕಿತ್ತು ಆದರೆ ಸ್ಟೇ ವೈಯರ್ ಹಾಗೂ ಟ್ರಾನ್ಸ್‌ಫಾರ್ಮರ್ ರಸ್ತೆಗೆ ಪಕ್ಕದಲ್ಲೇ ಇರುವುದು ಮಾಹಿತಿ ಬಂದಿದೆ. ಅದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಿ ತೆರವುಗೊಳಿಸಲಾಗುವುದು. ರಸ್ತೆ ಅಗಲೀಕರಣ ಸಂದರ್ಭ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಹಣ ಮೀಸಲಿಟ್ಟಿಲ್ಲ.
-ಶಿಲ್ಪಾ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಕಾರ್ಕಳ

Share This Article