

ಉಪ್ಪಿನಂಗಡಿ: ಬಸ್ಸಿನ ಕೊರತೆ ಗಣನೀಯವಾಗಿ ಹೆಚ್ಚಿ ಪ್ರಯಾಣಿಕರು ಬಸ್ಸಿಲ್ಲದೆ ಗಂಟೆಗಟ್ಟಲೆ ಕಾಯುವ ದುಸ್ಥಿತಿಗೆ ಸಿಲುಕಿದ್ದಾರೆ. ಇತ್ತ ಚಾಲಕರ ಕೊರತೆಯಿಂದ ಬಸ್ಸುಗಳು ಕಡಿಮೆ ಇದೆ ಸಹಕರಿಸಿ ಎಂದು ನೋಟೀಸು ಹಚ್ಚಿ ಸಾರಿಗೆ ಇಲಾಖೆಯವರು ಅಸಹಾಯಕತೆ ತೋರಿದ್ದಾರೆ.
ಕಳೆದ ಕೆಲ ತಿಂಗಳಿಂದ ಬಸ್ಸುಗಳ ಕೊರತೆ ಕಾಡುತ್ತಿದ್ದು, ವಿವಾಹದಂತಹ ಕಾರ್ಯಕ್ರಮಗಳು ಇದ್ದ ದಿನ ಪ್ರಯಾಣಿಕರು ಬಸ್ಸುಗಳಿಲ್ಲದೆ ದಿನವಿಡೀ ಕಾಯುವ ಪರಿಸ್ಥಿತಿಯಿದೆ. ಭಾನುವಾರದಂದು ಮಂಗಳೂರಿನ ಸಮೀಪದ ಮದುವೆ ಕಾರ್ಯಕ್ರಮಕ್ಕೆಂದು ಹತ್ತು ಗಂಟೆಗೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದ ಮಹಿಳೆಯೋರ್ವರಿಗೆ 12ರ ವೇಳೆಗೆ ಬಸ್ಸು ಸಿಕ್ಕಿದೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುವಾಗಲೂ ಬಸ್ಸು ಸಿಗದೆ ಸಾಯಂಕಾಲ 4.30ರವರೆಗೆ ರಸ್ತೆಬದಿಯಲ್ಲಿ ಕಾಯುತ್ತಾ ಇರಬೇಕಾದ ಸ್ಥಿತಿ ಉಂಟಾಗಿತ್ತು. ಇದು ಕೇವಲ ಓರ್ವ ಮಹಿಳೆಯ ಅನುಭವವಲ್ಲ. ಭಾನುವಾರ ಉಪ್ಪಿನಂಗಡಿ-ಮಂಗಳೂರು ನಡುವೆ ಪ್ರಯಾಣಿಸಿದ ಎಲ್ಲರಿಗೂ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಗುಂಪು ಕಾಣಿಸುತ್ತಿತ್ತು.
ಜನಪ್ರತಿನಿಧಿಗಳು ಪ್ರಯಾಣಿಕರ ನೈಜ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದೇವೆ ಎಂದು ಹೇಳಿದರೂ ಬಸ್ಸುಗಳನ್ನೇ ರಸ್ತೆಗಿಳಿಸದಿದ್ದರೆ ಪ್ರಯಾಣಿಸುವುದಾದರೂ ಹೇಗೆ? ಎಂದು ಜನರು ಕೇಳುತ್ತಿದ್ದಾರೆ.
ಉಚಿತ ಪ್ರಯಾಣದ ಯೋಜನೆಯನ್ನು ವಾಪಾಸು ಪಡೆದುಕೊಳ್ಳಿ ಅದರ ಬದಲು ಸಮರ್ಪಕ ಬಸ್ ಸೌಲಭ್ಯ ಒದಗಿಸಿ. ರಸ್ತೆಬದಿಯಲ್ಲಿ ಗಂಟೆಗಟ್ಟಲೆ ಕಾಯುವ ದುಸ್ಥಿತಿಯಿಂದ ಪಾರುಮಾಡಿ. ಹಿಂದೆ 3-4 ಗಂಟೆಯೊಳಗೆ ಮಂಗಳೂರಿಗೆ ಹೋಗಿ ಬರಲು ಸಾಧ್ಯವಾಗುತ್ತಿತ್ತು. ಈಗ ಇಡೀ ದಿನ ಮೀಸಲಿಡಬೇಕಾಗುತ್ತದೆ. ಜನರ ಸಮಯಕ್ಕೆ ಬೆಲೆ ಇಲ್ಲದಂತಾಗಿದೆ. ಯಾವ ಪಕ್ಷವೂ ಈ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತದಿರುವುದು ವಿಸ್ಮಯ ತಂದಿದೆ ಎಂದು ಭಾನುವಾರವಿಡೀ ಬಸ್ಸಿಗಾಗಿ ಕಾಯುತ್ತಾ ಕಂಗಾಲಾಗಿರುವ ಉಪ್ಪಿನಂಗಡಿ ನಿವಾಸಿ ದೀಪ್ತಿ ಶೆಟ್ಟಿ ಎಣಬುವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸ್ಸಿನ ಕೊರತೆಯಿಂದ ಪ್ರಯಾಣಿಕರು ಪಡುವ ಬವಣೆ ಹೇಳತೀರದಾಗಿದೆ. ಬಸ್ಸಿಗಾಗಿ ಬೀದಿಬದಿಯಲ್ಲಿ ಮಕ್ಕಳು ವೃದ್ಧರಾದಿಯಾಗಿ ಪ್ರಯಾಣಿಕರು ದೀರ್ಘ ಸಮಯ ಕಾಯುತ್ತಿರುವುದು ದಿನ ನಿತ್ಯ ಕಾಣುವಂತಾಗಿದೆ. ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದಾಗಲೆಲ್ಲಾ ಸಿಬ್ಬಂದಿ ಕೊರತೆ ಎಂಬ ನೆಪವನ್ನು ಮುಂದಿಡಲಾಗುತ್ತಿದೆ. ಸರ್ಕಾರಿ ಬಸ್ಸಿಗೆ ಸಿಬ್ಬಂದಿ ನೇಮಿಸಲಾಗದ್ದು ಸರ್ಕಾರದ ಲೋಪವೇ ಆಗಿದೆ.
ಕೊರತೆ ನೀಗಿದ ಬಳಿಕ ಸಮಸ್ಯೆ ಪರಿಹಾರ
ಎರಡು ತಿಂಗಳ ಹಿಂದೆ ಬಸ್ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದ.ಕ ಜಿಲ್ಲೆಯ ಮಂದಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕ ಹುದ್ದೆಗೆ ಆಸಕ್ತರಾಗದ ಕಾರಣ ಹೊರಜಿಲ್ಲೆಯಿಂದ ಬಂದ ಚಾಲಕ ನಿರ್ವಾಹಕರನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅವರು ರಜೆಯಲ್ಲಿ ಹೋದರೆ ಬದಲಿ ಚಾಲಕರಿಲ್ಲದ ಕಾರಣ ಬಸ್ಸುಗಳು ರಸ್ತೆಗಿಳಿಯುವಂತಿಲ್ಲ. ಈ ಕಾರಣ ಬಸ್ಸುಗಳ ಕೊರತೆ ಮೂಡಿದೆ. ಜಿಲ್ಲೆಯ ಮಂದಿಗೆ ಸೂಕ್ತ ತರಬೇತು ನೀಡಿ ಚಾಲಕ ನಿರ್ವಾಹಕ ಹುದ್ದೆಗೆ ಜಿಲ್ಲೆಯವರನ್ನೇ ನೇಮಿಸುವ ಪ್ರಯತ್ನ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಮರ್ಪಕ ಬಸ್ಸು ವ್ಯವಸ್ಥೆ ಆಗಲಿದೆ ಎಂದಿದ್ದರು. ಆದರೆ ತಿಂಗಳೆರಡು ಸಂದರೂ ಬಸ್ ಕೊರತೆ ಬಗೆಹರಿಯದೆ ಬಿಗಡಾಯಿಸುತ್ತಿರುವುದು ವಿಪರ್ಯಾಸವೆನಿಸಿದೆ.
ನೋಟಿಸ್ ಅಂಟಿಸಿ ಪಾರಾಗುವ ಯತ್ನ
ಸೋಮವಾರವೂ ಬಸ್ಸಿನ ಕೊರತೆ ಕಾಡಿದ್ದು, ಜನರ ಪ್ರಶ್ನೆಗಳಿಗೆ ಮತ್ತು ಆಕ್ರೋಶಕ್ಕೆ ಉತ್ತರಿಸಲಾಗದೆ ಉಪ್ಪಿನಂಗಡಿಯ ಸಂಚಾರ ನಿಯಂತ್ರಕರು ಚಾಲಕರ ಕೊರತೆಯಿಂದ ಬಸ್ಸುಗಳು ಕಡಿಮೆ ಇವೆ ಸಹಕರಿಸಿ ಎಂದು ಸೂಚನಾ ಫಲಕವನ್ನು ಅಂಟಿಸಿದ್ದಾರೆ. ಈ ಮೂಲಕ ಬಸ್ಸಿಗಾಗಿ ಕಾದು ಕುಳಿತು ಕೆರಳುವ ಪ್ರಯಾಣಿಕರ ಪ್ರಶ್ನೆಗಳಿಂದ ಪಾರಾಗಲು ಯತ್ನಿಸಿದ್ದಾರೆ.