

ಬೇಲೂರು: ಬೇಲೂರು-ಮೂಡಿಗೆರೆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಕೊರತೆ ಮತ್ತು ವಿಳಂಬ ನೀತಿಯಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ನಾಗೇನಹಳ್ಳಿ ಗ್ರಾಮದ ಎನ್.ಬಿ.ಯಶವಂತ್‌ಗೌಡ ದೂರಿದ್ದಾರೆ.
ಬೇಲೂರು-ಚೀಕನಹಳ್ಳಿ-ಮೂಡಿಗೆರೆ ಮಾರ್ಗವಾಗಿ ಪ್ರತಿನಿತ್ಯ, ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು ನಾನಾ ಕೆಲಸ ಕಾರ್ಯಗಳಿಗಾಗಿ ಹೋಗಿ ಬರಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ಚಿಕ್ಕಮಗಳೂರು ವಿಭಾಗದ ಬೇಲೂರು-ಮೂಡಿಗೆರೆ ಘಟಕದ ವೇಗದೂತ ಬಸ್‌ಗಳ ಕೆಲ ಚಾಲಕರು ಮತ್ತು ನಿರ್ವಾಹಕರ ದುರ್ನಡತೆ ಮತ್ತು ನಿರ್ಲಕ್ಷ್ಯದಿಂದ ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಮಸ್ಯೆ ತೋಡಿಕೊಂಡಿದ್ದಾರೆ.
ಈ ಮಾರ್ಗದಲ್ಲಿ ನಾನ್‌ಸ್ಟಾಪ್ ಬಸ್‌ಗಳು ಪ್ರಾರಂಭವಾಗಿದ್ದರಿಂದ ಸಾರ್ವಜನಿಕರಿಗೆ ಅನನುಕೂಲವಾಗಿದೆ. ಮುಂಜಾನೆ ಪ್ರಯಾಣಿಸಲು ಬಸ್‌ಗಳೇ ಇಲ್ಲವಾಗಿದೆ. ಬೇಲೂರು ಬಸ್ ಡಿಪೋ ವ್ಯವಸ್ಥಾಪಕಿ ಶಬಾನಾ ಬಾನು ಅವರ ನಿರ್ಲಕ್ಷ್ಯದಿಂದ ಪ್ರಯಾಣಿಕರು ಹೈರಾಣಾಗಿದ್ದು ಏನಾದರೂ ಕೇಳಿದರೆ ಇವರು ಸಾರ್ವಜನಿಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ. ಬಸ್‌ಗಳ ಚಾಲಕರು ನಿಗದಿತ ಸಮಯವನ್ನು ಸಹ ಪಾಲನೆ ಮಾಡದಿರುವುದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲಗಳು ಮತ್ತು ತೊಂದರೆ ಉಂಟಾಗುತ್ತಿದೆ. ಆಟೋ ಮತ್ತು ಖಾಸಗಿ ವಾಹನಕ್ಕೆ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು ವಿಭಾಗದ ಡಿಟಿಒ ಮತ್ತು ಸಂಚಾರ ನಿಯಂತ್ರಕರು ಸ್ಪಂದಿಸುತ್ತಿದ್ದರೂ ಸಹ ಚಾಲಕ ಮತ್ತು ನಿರ್ವಾಹಕರಿಂದ ತೊಂದರೆಯಾಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕೆ ಇರುವ ಸಾರಿಗೆ ಬಸ್‌ಗಳು ಉಪಯೋಗಕ್ಕೆ ಬಾರದೆ ಇರುವಂತಹ ಪರಿಸ್ಥಿತಿ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ, ನೌಕರರಿಗೆ ಹಾಗೂ ಪ್ರಯಾಣಿಕರಿಗಾಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.