ಶಾರ್ಟ್ ಸರ್ಕ್ಯೂಟ್‌ಗೆ ಕೃಷಿ ಪರಿಕರ, ಬೆಳೆ ಭಸ್ಮ

ಶಾರ್ಟ್ ಸರ್ಕ್ಯೂಟ್‌ಗೆ ಕೃಷಿ ಪರಿಕರ, ಬೆಳೆ ಭಸ್ಮ
Published on

ನಂಜನಗೂಡು: ತಾಲೂಕಿನ ಅಂಬಳೆ ಗ್ರಾಮದ ಜಮೀನೊಂದರಲ್ಲಿ ಭಾನುವಾರ ಜೋರಾಗಿ ಬೀಸಿದ ಗಾಳಿಗೆ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದು ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆ ಹಾಗೂ ಕೃಷಿ ಪರಿಕರಗಳಿಗೆ ಬೆಂಕಿ ತಗುಲಿ ನಷ್ಟ ಸಂಭವಿಸಿದೆ.

ಗ್ರಾಮದ ರೈತ ಮುಖಂಡ ರವಿ ಅವರ ಜಮೀನಲ್ಲಿ ಪಂಪ್‌ಸೆೆಟ್ ಸಂಪರ್ಕ ನೀಡಲು ವಿದ್ಯುತ್ ಕಂಬಗಳು ಹಾದು ಹೋಗಿದ್ದು, ವೇಗವಾಗಿ ಬೀಸಿದ ಗಾಳಿಯಿಂದ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದು ಬೆಂಕಿ ಹತ್ತಿಕೊಂಡಿವೆ. ಇದರಿಂದ ರೈತರಿಗೆ ಸೇರಿದ ಡ್ರಿಪ್ ಪೈಪ್‌ಗಳು, ಡ್ರಮ್‌ಗಳು, ಹಾಗೂ ಟೊಮ್ಯಾಟೊ ಬೆಳೆ ಹೊತ್ತಿ ಉರಿದಿದೆ. ಇದರಿಂದ ರೈತ ರವಿಗೆ ಭಾರಿ ನಷ್ಟ ಸಂಬವಿಸಿದೆ.

ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಬಗ್ಗೆ ರೈತ ರವಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ. ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳ ನಿರ್ಲಕ್ಷೃವೇ ಈ ಘಟನೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ತಂತಿಗಳು ತುಂಡಾಗಿದ್ದ ಸಂದರ್ಭದಲ್ಲಿ ಯಾರಾದರೂ ರೈತರು ಸಿಕ್ಕಿ ಬಿದ್ದಿದ್ದರೆ ಏನು ಗತಿ ಎಂದು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ನಿ ಅವಘಡದಿಂದ ನನಗೆ ಭಾರಿ ನಷ್ಟವಾಗಿದ್ದು, ತಕ್ಷಣವೇ ಪರಿಹಾರ ನೀಡಬೇಕು ಹಾಗೂ ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net