ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಕೆಮ್ಮಾರದಲ್ಲಿ ಅವಘಡ : ಒಳಗಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು

fire
ಕೊಯಿಲ ಗ್ರಾಮದ ಕೆಮ್ಮಾರ ಶಾಲೆ ಬಳಿ ಮನೆ ಒಳಗಿನಿಂದ ಬೆಂಕಿ ಹೊತ್ತಿಕೊಂಡು ಮನೆ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
Published on

ಕಡಬ: ಕೊಯಿಲ ಗ್ರಾಮದ ಕೆಮ್ಮಾರ ಶಾಲೆ ಬಳಿ ಬೆಂಕಿ ಹತ್ತಿಕೊಂಡು ಮನೆ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಜೂ. 30ರಂದು ಮಧ್ಯಾಹ್ನದ ಹೊತ್ತಿಗೆ ಸಂಭವಿಸಿದೆ.

ದಿ.ಇಬ್ರಾಹಿಂ ಹಾಜಿ ನೀರಾಜೆಯವರ ಪುತ್ರ ಅಬ್ದುಲ್ ರಹಿಮಾನ್ ಎಂಬುವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಡ್ ರೂಂನಲ್ಲಿ ಬೆಂಕಿ ಉರಿಯತೊಡಗಿ ಮನೆಯೊಳಗೆ ಆವರಿಸಿಕೊಂಡು ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಸಿಂಗ್ ಮಷಿನ್, ಬಟ್ಟೆಗಳು, ಆಹಾರ ಸಾಮಾಗ್ರಿಗಳು, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನಾ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಮನೆ ಸುತ್ತ ಹೊಗೆ ಆವರಿಸಿರುವುದನ್ನು ಗಮನಿಸಿ ಸ್ಥಳೀಯರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಅಬ್ದುಲ್ ರಹಿಮಾನ್ ಮತ್ತು ಪತ್ನಿ ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ಅವರ ತಂಗಿ ಮತ್ತು ಮಕ್ಕಳು ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು.

ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ವಿದ್ಯುತ್ ಸಂಪರ್ಕದ ಸ್ವಿಚ್ ತೆಗೆದು, ಗ್ಯಾಸ್ ಸಂಕರ್ಪ ಕಡಿತಗೊಳಿಸಿ ಸಂಭವನೀಯ ದುರಂತ ತಪ್ಪಿಸಿದ್ದಾರೆ. ಈ ಮಧ್ಯೆ ಪುತ್ತೂರಿನಿಂದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ಸಂಪೂರ್ಣವಾಗಿ ನಂದಿಸಿದರು.

ಕೊಯಿಲ ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಶ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಙಳ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಘಟನೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net