

ಹನೂರು: ಸಂಕ್ರಾತಿ ಹಬ್ಬದ ಹಿನ್ನೆಲೆ ಪಟ್ಟಣದ ಸುತ್ತಮುತ್ತಲ ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರಿಂದ ಸೋಮವಾರ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.
ಸುಗ್ಗಿ ಸಮಯದ ವರ್ಷದ ಮೊದಲನೆ ಹಬ್ಬವಾದ ಸಂಕ್ರಾತಿಯನ್ನು ಹನೂರು ಸುತ್ತಮುತ್ತಲ ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಾಗಾಗಿ ಬಂಡಳ್ಳಿ, ಶಾಗ್ಯ, ಅಣಗಳ್ಳಿದೊಡ್ಡಿ, ಚಂಗವಾಡಿ, ಭೈರನತ್ತ, ತೋಮಿಯಾರ್‌ಪಾಳ್ಯ, ಅಜ್ಜೀಪುರ, ಎಲ್ಲೇಮಾಳ, ಚಿಕ್ಕಮಾಲಾಪುರ, ಆರ್.ಎಸ್.ದೊಡ್ಡಿ, ಮಂಗಲ, ಕಣ್ಣೂರು ಹಾಗೂ ಗುಂಡಾಪುರ ಸೇರಿದಂತೆ ವಿವಿಧ ಗ್ರಾಮದ ಜನರು ಪಟ್ಟಣಕ್ಕೆ ಆಗಮಿಸಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಅಂಗಡಿ ಮುಂಗಟ್ಟುಗಳು, ಹೂವು, ಹಣ್ಣು, ಪೂಜಾ ಸಾಮಾಗ್ರಿ ಹಾಗೂ ತರಕಾರಿ ಅಂಗಡಿಗಳಲ್ಲಿ ಜನರು ಹೆಚ್ಚಾಗಿ ಕಂಡು ಬಂದರು. ಹಬ್ಬಕ್ಕೆ ಮುಖ್ಯವಾಗಿ ಅತ್ಯಗತ್ಯವಾದ ಕಬ್ಬನ್ನು ರೈತರು ಪಟ್ಟಣಕ್ಕೆ ತಂದು ಮಾರಾಟ ಮಾಡಿದರು. ಪಟ್ಟಣದಲ್ಲಿ ಜೋಡಿ ಕಬ್ಬಿನಸೋಗೆಯ ಧಾರಣೆ 100ರೂ, ಬೆಲ್ಲ 50 ಅಚ್ಚುಗಳ ಒಂದು ಕಟ್ಟಿಗೆ 220 ರೂ, ಹಾಗೂ ಎಳ್ಳು ಕೆ.ಜಿಗೆ 200 ರೂ. ದರವಿತ್ತು. ಇನ್ನು ಸೇಬು ಕೆ.ಜಿ.ಗೆ 180 ರೂ. ದಾಳಿಂಬೆ 200 ರೂ., ದ್ರಾಕ್ಷಿ 120ರೂ. ಮೂಸಂಬಿ 80 ರೂ. ಕಿತ್ತಳೆ 80 ರೂ. ಹಾಗೂ ಏಲಕ್ಕಿ ಬಾಳೆಗೆ 80 ರೂ ದರವಿತ್ತು. ಜತೆಗೆ ಕಾಕಡ ಮೀಟರ್‌ಗೆ 100 ರೂ., ಕನಕಾಂಬರ 120, ಸೇವಂತಿಗೆ 80 ರೂ., ಚೆಂಡು ಹೂವು 60 ರೂ. ಹಾಗೂ ಹೂವಿನ ಹಾರ 80 ರೂ.ನಂತೆ ಮಾರಾಟವಾದವು. ಹಬ್ಬದ ಹಿನ್ನಲೆ ಅಗತ್ಯ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿತ್ತು. ಆದರೂ ಜನರು ಖರೀದಿಸಿದರು.
ಕಟ್ಟಿನ ಕಾವಲು: ಹನೂರು ಭಾಗದಲ್ಲಿ ಬಹುತೇಕ ರೈತರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಸುಗ್ಗಿಯ ಈ ಕಾಲದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಂತಹ ದವಸ ಧಾನ್ಯವನ್ನು ಒಕ್ಕಣೆ ಮಾಡಿ ಮನೆಯಲ್ಲಿ ಶೇಖರಣೆ ಮಾಡಿಕೊಂಡಿದ್ದಾರೆ. ತಮ್ಮ ಹೊಲ, ಜಮೀನಿನ ಎಲ್ಲೆಗೆ ಕಟ್ಟಿಗೆಯ ಬೂದಿಯಿಂದ ಗೆರೆ ಹಾಕುವುದರ ಮೂಲಕ ಪೂಜೆಯನ್ನು (ಕಟ್ಟಿನ ಕಾವಲು) ನೆರವೇರಿಸಿದರು. ಅಲ್ಲದೆ ಜಮೀನಿನ ತೆಂಗಿನಮರಕ್ಕೆ ಸುಣ್ಣ ಹಾಗೂ ಕೆಂಪು ನೀರನ್ನು ಬಳಿಯುವುದರ ಮೂಲಕ ಪೂಜೆ ಸಲ್ಲಿಸಿದರು. ಜತೆಗೆ ಪ್ರತಿ ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು.