ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಇಲ್ಲಿನ ಚನ್ನಯ್ಯ ಉದ್ಯಾನ ಸುತ್ತಲು ವಹಿವಾಟು ನಡೆಸುವ ಹೂವು, ಹಣ್ಣು ಅಂಗಡಿ, ಚಿಲ್ಲರೆ ವ್ಯಾಪಾರಸ್ಥರಿಗೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ನಗರಸಭೆಯು ತೀರ್ಮಾನ ಕೈಗೊಂಡಿದೆ.
ಎಂ.ಜಿ.ರಸ್ತೆಯ ವಿಸ್ತರಣೆಯ ಕಾಮಗಾರಿ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಚನ್ನಯ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ತಾತ್ಕಾಲಿಕ ತಳ್ಳುವ ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡು ಬೀದಿಬದಿಯ ವ್ಯಾಪಾರಸ್ಥರು ಹೂವು, ಹಣ್ಣು, ಎಲೆ ಅಡಕೆ, ಸಿಹಿ ತಿಂಡಿ ತಿನಿಸು ಸೇರಿ ಇತರ ಸಾಮಗ್ರಿಗಳ ವಹಿವಾಟಿನ ಆದಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಿಂದೆ ರಸ್ತೆಯ ವಿಸ್ತರಣೆ ಹಿನ್ನೆಲೆಯಲ್ಲಿ ಉದ್ಯಾನದ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಅಭಿವೃದ್ಧಿ ಕೆಲಸದ ಹಿನ್ನೆಲೆಯಲ್ಲಿ ನೆಲೆಯನ್ನು ಕಳೆದುಕೊಳ್ಳಲಾಗುತ್ತಿದೆ. ಇದರ ಆತಂಕದ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಬೀದಿಬದಿ ವ್ಯಾಪಾರಸ್ಥರಿಗೆ 30 ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಡುವ ಮೂಲಕ ಶಾಶ್ವತ ನೆಲೆ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ.
ಮುಕ್ತಿಧಾಮ ವಾಹನ ಸೇವೆ
ಮುಕ್ತಿಧಾಮ ವಾಹನವನ್ನು ನಗರಸಭೆಯಿಂದ ಖರೀದಿಸಲು 15 ಲಕ್ಷ ರೂ. ಅನುದಾನ ಮೀಸಲಿಡಲು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಚಿಕ್ಕಬಳ್ಳಾಪುರವು ಜಿಲ್ಲಾ ಕೇಂದ್ರವಾಗಿ 16 ವರ್ಷಗಳೇ ಪೂರೈಸಿದೆ. ಆದರೆ, ಇಲ್ಲಿ ಬಡವರು ಸಂಬಂಧಿಕರ ಅಂತ್ಯಸಂಸ್ಕಾರ ಕೈಗೊಳ್ಳಲು ಒಂದು ಮುಕ್ತಿಧಾಮ ವಾಹನ ಸೇವೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ದೂರದ ಸ್ಮಶಾನಗಳಿಗೆ ಮೃತದೇಹಗಳನ್ನು ದುಬಾರಿ ಬಾಡಿಗೆ ನೀಡಿ ಖಾಸಗಿ ವಾಹನಗಳಲ್ಲಿ ತೆಗೆದುಕೊಂಡು ಹೋಗಲು ಆರ್ಥಿಕ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆಯಿಂದಲೇ ಮುಕ್ತಿಧಾಮ ವಾಹನವೊಂದನ್ನು ಖರೀದಿಸಿ, ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಇದು ಅನುಷ್ಠಾನದಿಂದ ನಗರ ವ್ಯಾಪ್ತಿಯಲ್ಲಿ ಅನಾಥ ಶವ ಸಾಗಿಸಲು ಇಲ್ಲವೇ ಬಡ ಕುಟುಂಬದ ಸಂಬಂಧಿಕರ ಶವ ಸಂಸ್ಕಾರಕ್ಕೆ ಅನುಕೂಲವಾಗಲಿದೆ.