

ಚಿತ್ರದುರ್ಗ : ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಬೆಳಗ್ಗೆ ಶೂನ್ಯಪೀಠಾರೋಹಣ ಮಾಡಿದರು. ಶ್ರೀ ಮಠದ ಮೂಲ ಗದ್ದುಗೆಗೆ ಶರಣರು ಪಾದ ಪೂಜೆ ನೆರವೇರಿಸಿದರು. ಬಳಿಕ ರುದ್ರಾಕ್ಷಿ ಕೀರಿಟ ಧರಿಸಿ,ಕೈಯಲ್ಲಿ ವಚನದ ಕಟ್ಟು ಹಿಡಿದ ಶರಣರು ಮರದ ಸಿಂಹಾಸನದ ಮೇಲೆ ಕುಳಿತು ಭಕ್ತರಿಗೆ ದರ್ಶನ ನೀಡಿದರು.
ಈ ವೇಳೆ ಉತ್ಸವ ಸಮಿತಿ ಗೌರವಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಬಂಗಾರದ ಕಿರೀಟ ಹಾಗೂ ಸಮಿತಿ ಅಧ್ಯಕ್ಷ ಎನ್.ಜಯ ಣ್ಣ ಬಂಗಾರದ ಪಾದುಕೆಗಳನ್ನು ಕೈಯಲ್ಲಿ ಹಿಡಿದಿದ್ದರು. ಬಳಿಕ ಕಿರೀಟವನ್ನು ತೆಗೆದಿರಿಸಿದ ಬಳಿಕ ಶರಣರ ನೇತೃತ್ವದಲ್ಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿದ್ದ ಅಲ್ಲಮ ದೇವರ,ಬಸವಣ್ಣನವರ ಭಾವಚಿತ್ರಗಳ ಮತ್ತು ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಶ್ರೀ ಮಠದ ಆವರಣದಲ್ಲಿ ಭಕ್ತರ ಘೋಷಣೆಗಳ ನಡುವೆ ನಡೆಯಿತು. ವೀರಗಾಸೆ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ನಾನಾ ಮಠಾಧೀಶರು,ಹರಗುರು ಚರ ಮೂರ್ತಿಗಳು, ನಾನಾ ಗಣ್ಯರು ಉಪಸ್ಥಿತರಿದ್ದರು.
ಶೂನ್ಯಪೀಠಾರೋಹಣ ಮೊದಲು ಸುದ್ದಿಗಾರರ ಜತೆ ಮಾತನಾಡಿದ ಶರಣರು,ಶ್ರೀ ಮಠದ ಪರಂಪರೆಯಂತೆ ಹಿರಿಯ ಸ್ವಾಮೀಜಿ ಗಳು,ಬಂಗಾರ ಕಿರೀಟ,ಪಾದುಕೆಗಳನ್ನು ಧರಿಸಿ,ಕೈಯಲ್ಲಿ ಬೆಳ್ಳಿಗದೆ ಹಿಡಿದು ಬೆಳ್ಳಿ ಸಿಂಹಾಸನರೂಢರಾಗಿ ಭಕ್ತರಿಗೆ ದರ್ಶನ ಕೊಡುತ್ತಿದ್ದರು. ಆದರೆ ತಾವು ಪೀಠವನ್ನು ಏರಿದ ಮೇಲೆ ಬಂಗಾರದ ಆಭರಣಗಳನ್ನು ತ್ಯಾಗ ಮಾಡಿ,ರುದ್ರಾಕ್ಷಿ ಕಿರೀಟ ಹಾಗೂ ವಚನಕಟ್ಟನ್ನು ಕೈಯಲ್ಲಿ ಹಿಡಿದು,ಕಟ್ಟಿಗೆಯಿಂದ ಮಾಡಿದ ಸಿಂಹಾಸನದಲ್ಲಿ ಕುಳಿತು ದರ್ಶನ ಕೊಡುತ್ತಿದ್ದೇವೆ. ಕರೊನಾ ಕಾರಣಕ್ಕೆ ಅದ್ಧೂರಿ,ಅಡಂಬರಕ್ಕೆ ಅವಕಾಶ ವಿಲ್ಲದಂತೆ ಸರಳ ರೀತಿಯಲ್ಲಿ ಶರಣ ಸಂಸ್ಕೃತಿ ಉತ್ಸವದ ನಾನಾ ಕಾರ‌್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.