ಚಪ್ಪಲಿ ಸ್ಟ್ಯಾಂಡಿಗೂ ಉಂಟು!

Shoe rack
Published on

ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ‘ಮನೆಯೇ ಮಂತ್ರಾಲಯ’, ಹಾಗಾಗಿ ಮನೆಯ ಒಳಗೆ ಚಪ್ಪಲಿಗೆ ಅವಕಾಶವಿಲ್ಲ. ಚಪ್ಪಲಿ ಏನಿದ್ದರೂ ಮನೆಯ ಹೊರ ಭಾಗದಲ್ಲಿಯೇ ಇರಬೇಕು. ಇದಕ್ಕೆ ವೈದ್ಯಕೀಯ ಕಾರಣವೂ ಉಂಟು. ಊರೆಲ್ಲ ಸುತ್ತಾಡಿ ಬರುವ ಚಪ್ಪಲಿಯನ್ನು ಮನೆಯೊಳಗೆ ತಂದರೆ ಅದರಲ್ಲಿರುವ ಕೊಳೆ, ರೋಗಾಣುಗಳು ಮನೆ ಮಂದಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಚಪ್ಪಲಿ ಹೊರಗಿಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ.

ಈ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಮಾತ್ರವಲ್ಲ, ಎಷ್ಟೆಲ್ಲ ಖರ್ಚು ಮಾಡಿ ಸುಂದರವಾಗಿ ವಿನ್ಯಾಸಗೊಳಿಸದ ಮನೆಯ ಹೊರಭಾಗದಲ್ಲಿ ಚಪ್ಪಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಮನೆಗೆ ಲಕ್ಷಣವಲ್ಲ. ಆದ್ದರಿಂದ ಚಪ್ಪಲಿಗಳನ್ನು ಒಂದು ಕಡೆ ಒಪ್ಪವಾಗಿ ಜೋಡಿಸಿಡಬೇಕು. ಹಾಗಾಗಿಯೇ ಮನೆ ನಿರ್ಮಾಣದ ಕಾರ್ಯದಲ್ಲೂ ಚಪ್ಪಲಿ ಸ್ಟ್ಯಾಂಡ್ ಸಹ ಮಹತ್ವ ಪಡೆದುಕೊಂಡಿದೆ. ಇದಕ್ಕಾಗಿಯೇ ಇಂದು ಮಾರುಕಟ್ಟೆಗಳಲ್ಲಿ ತರಹೇವಾರಿ ಚಪ್ಪಲಿ ಸ್ಟ್ಯಾಂಡ್ಗಳು ಲಭ್ಯವಿದೆ.

ಸ್ಯಾಂಡ್‌ಗಳ ವಿಧಗಳು: ಕಬ್ಬಿಣದ ರ್ಯಾಕ್ ರೀತಿಯ ಸ್ಟ್ಯಾಂಡ್, ಪೆಟ್ಟಿಗೆ ರೂಪದಲ್ಲಿರುವ ಮರದ ಸ್ಟ್ಯಾಂಡ್, ಬೆಂಚ್ ಶೂ ಸ್ಟ್ಯಾಂಡ್, ಚಪ್ಪಲಿಗಳನ್ನು ತೂಗು ಹಾಕುವ ಸ್ಟ್ಯಾಂಡ್, ಫೈಬರ್ ಸ್ಟ್ಯಾಂಡ್ ಹೀಗೆ ಹಲವು ವಿಧಗಳಲ್ಲಿ ಮಾರುಕಟ್ಟೆಗಳಲ್ಲಿ ಚಪ್ಪಲಿ ಸ್ಟ್ಯಾಂಡ್ಗಳು ಲಭ್ಯವಿದೆ. ನಿಮ್ಮ ಆಯ್ಕೆಯ ಸ್ಟ್ಯಾಂಡ್ಗಳನ್ನು ತಂದು ಮನೆಯ ಅಂದಗೆಡಿಸದ ರೀತಿಯಲ್ಲಿ ಚಪ್ಪಲಿಗಳನ್ನು ಜೋಡಿಸಿಕೊಳ್ಳಬಹುದು.

ಚಪ್ಪಲಿ ಸ್ಟ್ಯಾಂಡಿಗೂ ವಾಸ್ತು ಇದೆ: ಚಪ್ಪಲಿಯನ್ನು ಮನೆ ಹೊರಗೇ ಇಡುತ್ತೇವಾದರೂ, ಅದನ್ನು ಎಲ್ಲಿ? ಹೇಗೆ? ಇಡಬೇಕು ಎಂಬ ಬಗ್ಗೆಯೂ ಪ್ರಶ್ನೆಗಳು ಮೂಡಬಹುದು. ಆ ಬಗ್ಗೆ ವಾಸಶಾಸದಲ್ಲೂ ಉಲ್ಲೇಖವಿದೆ. ಜ್ಯೋತಿಷಿಗಳ ಪ್ರಕಾರ, ಚಪ್ಪಲಿ ಸ್ಟ್ಯಾಂಡನ್ನು ಪಶ್ಚಿಮ ದಿಕ್ಕಿನಲ್ಲಿಡುವುದು ಉತ್ತಮ. ಆದರೆ ಮನೆಯ ಮುಖ್ಯದ್ವಾರದ ಮುಂಭಾಗದಲ್ಲಿ ಇಡಬಾರದು. ಏಕೆಂದರೆ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವುದು ಮುಖ್ಯದ್ವಾರದ ಮೂಲಕ. ಅಂತಹ ಕಡೆ ಚಪ್ಪಲಿ ಸ್ಟ್ಯಾಂಡ್ ಇರಿಸಿದರೆ, ಆ ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಲು ಅಡ್ಡಿಯಾಗುತ್ತದೆ. ಹಾಗಾಗಿ ಮುಂಬಾಗಿಲಿನಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಬಾರದು, ಹಾಗೆಯೇ ಚಪ್ಪಲಿಗಳನ್ನೂ ಬಾಗಿಲಲ್ಲಿ ಬಿಡಬಾರದು.

ಎಲ್ಲೆಲ್ಲಿ ಇಡಬಾರದು: ಈಶಾನ್ಯ ದಿಕ್ಕು ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಇದು ಪ್ರಾರ್ಥನೆ ಮಾಡಲು, ದೇವರನ್ನು ಸ್ತುತಿಸಲು ಸೂಕ್ತವಾದ ದಿಕ್ಕು. ಹಾಗಾಗಿ ಈ ದಿಕ್ಕಿನಲ್ಲಿ ಚಪ್ಪಲಿಗಳನ್ನಿಡಬಾರದು. ಹೊಸ ಅವಕಾಶಗಳ ಬಾಗಿಲು ತೆರೆಯುವ ದಿಕ್ಕು ಉತ್ತರ. ಆದಕಾರಣ ಉತ್ತರ ದಿಕ್ಕಿನಲ್ಲಿ ಏನಾದರೂ ಇರಿಸಿದರೆ ವೃತ್ತಿ ಬದುಕಿನಲ್ಲಿ ಸಂಕಷ್ಟಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಸಾಮಾಜಿಕ ಸಂಘಟನೆ ಹಾಗೂ ಸಂಪರ್ಕವನ್ನು ಸೂಚಿಸುವ ದಿಕ್ಕು ಪೂರ್ವ. ಹೀಗಾಗಿ ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಬದುಕು ನಿಮ್ಮದಾಗಬೇಕೆಂದ್ರೆ ಮನೆಯ ಪೂರ್ವ ದಿಕ್ಕಿನಲ್ಲಿ ಚಪ್ಪಲಿಗಳನ್ನಿಡಬಾರದು. ಆಗ್ನೇಯ ದಿಕ್ಕು ಮನೆಗೆ ಹಣ ಹಾಗೂ ಸಂಪತ್ತಿನ ಹರಿವನ್ನು ಸೂಚಿಸುವ ದಿಕ್ಕಾಗಿದೆ. ಹೀಗಾಗಿ ಈ ಭಾಗದಲ್ಲಿ ಚಪ್ಪಲಿಗಳನ್ನಿಟ್ಟರೆ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ ಎನ್ನುತ್ತದೆ ವಾಸ್ತುಶಾಸ್ತ್ರ.

ಮನೆಯೊಳಗೆ ನಿಷಿದ್ಧ: ಮನೆಯೊಳಗೆ ಚಪ್ಪಲಿಗಾಗಲಿ ಅದರ ಸ್ಟ್ಯ್ಂಡುಗಳಿಗಾಗಲಿ ಅವಕಾಶ ನಿಶಿದ್ಧ. ಆದರೆ ಕೆಲವರು ನಾವು ಸದಾ ಕಾರಿನಲ್ಲೇ ತಿರುಗಾಡುತ್ತೇವೆ. ಹಾಗಾಗಿ ಕೊಳೆ ಇರುವುದಿಲ್ಲ ಎಂದು ಬೆಡ್ ರೂಂವರೆಗೂ ಶೂ, ಚಪ್ಪಲಿಯಲ್ಲೇ ಮನೆಯೊಳಗೆ ಪ್ರವೇಶಿಸುತ್ತಾರೆ. ಇದರಿಂದ ನಕಾರಾತ್ಮಕ ಪ್ರಭಾವ ಬೀರಲಿದ್ದು, ದಾಂಪತ್ಯದಲ್ಲಿ ಬಿರುಕು, ಮನೆಯ ಸದಸ್ಯರ ನಡುವೆ ಮುನಿಸು, ದಾರಿದ್ರ್ಯ, ಅನಾರೋಗ್ಯ, ಆರ್ಥಿಕ ಸಮಸ್ಯೆಗಳು ಕಾಡಲಿವೆ. ಅಲ್ಲದೆ, ಚಪ್ಪಲಿ ಕೊಳೆಯ ಸಂಕೇತ. ಹಾಗಾಗಿ ಇದು ಕೇವಲ ವಾಸ್ತು ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮನೆಯ ಒಳಗೆ ಇಡುವುದು ಒಳ್ಳೆಯದಲ್ಲ. ಹಾಗಾಗಿಯೇ ದೇವಸ್ಥಾನ, ಆಸ್ಪತ್ರೆ ಪ್ರವೇಶಿಸುವಾಗಲೂ ಚಪ್ಪಲಿಯನ್ನು ಹೊರಗೆ ಬಿಡುವಂತೆ ಸೂಚಿಸಲಾಗುತ್ತದೆ. ಹೀಗಿರುವಾಗ ಮನೆಒಳಗೆ ಚಪ್ಪಲಿ ಪ್ರವೇಶ ಮಾಡುವುದು ಎಷ್ಟು ಸರಿ? ನೀವೇ ಯೋಚಿಸಿ.

ಎಲ್ಲಿ ಇಟ್ಟರೆ ಸೂಕ್ತ? ಚಪ್ಪಲಿ ಸ್ಟ್ಯಾಂಡನ್ನು ಇರಿಸಲು ಸೂಕ್ತ ಸ್ಥಳ ಪಶ್ಚಿಮ ಹಾಗೂ ನೈರುತ್ಯ ದಿಕ್ಕು. ಚಪ್ಪಲಿ ಸ್ಟ್ಯಾಂಡ್ ಸದಾ ಮುಚ್ಚಿರುವಂತೆ ಪೆಟ್ಟಿಗೆ ರೂಪದಲ್ಲಿದ್ದರೆ ಸೂಕ್ತ. ಅಲ್ಲದೆ ಅದನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಅಸ್ತವ್ಯಸ್ತಗೊಂಡಿರುವ ಚಪ್ಪಲಿ ಸ್ಟ್ಯಾಂಡ್ ನಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net