

ಮಾಗಡಿ : ಸನಾತನ ಹಿಂದು ಧರ್ಮದಲ್ಲಿ ಮಹಾ ಶಿವರಾತ್ರಿಗೆ ವಿಶೇಷವಾದ ಮಹತ್ವವಿದೆ ಎಂದು ಗುಮ್ಮಸಂದ್ರ ಶ್ರೀ ರುದ್ರಮುನೇಶ್ವರ ಮಠದ ಶ್ರೀ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಮ್ಮಸಂದ್ರ ರುದ್ರಮುನ್ನೇಶ್ವರ ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಹಾಗೂ ರುದ್ರಮುನೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವನಾಮ ಸ್ಮರಣೆಯಿಂದ ಮುಕ್ತಿದಾರಿ, ಜಾಗರಣೆ, ಹರಿಕಥೆ ನಂತರ ನಡೆಯುವ ಆರಾಧನೆ ಬೇರೆಲ್ಲೂ ನಡೆಯುವುದಿಲ್ಲ. ತಾಲೂಕಿನ ಮಠಮಾನ್ಯ, ಶಿವಾಲಯಗಳಲ್ಲಿ ಅನ್ನಸಂತರ್ಪಣೆ ಅವಿರತವಾಗಿ ನಡೆಯುವುದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಷ್ಟು ಮಹತ್ವ ಶಿವರಾತ್ರಿಗೆ ಇದೆ ಎಂದರು.
ಶರಣರು ಶಿವಪೂಜೆಯಿಂದ ಸಕಲರಿಗೂ ಲೇಸನ್ನು ಬಯಸಿದರು. ಶರಣರ ಹಾದಿಯಲ್ಲಿ ನಡೆದಾಗ ಮಾತ್ರ ಶಿವನ ದರ್ಶನವಾಗುತ್ತದೆ. ಮನುಷ್ಯನ ಜನ್ಮ ಪಾವನವಾಗುತ್ತದೆ. ಧಾರ್ಮಿಕ ಆಚರಣೆಗಳು ಜೀವನದ ಮೌಲ್ಯವನ್ನು ಎತ್ತಿಹಿಡಿಯುತ್ತವೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ ಬೆಳೆಸಿಕೊಂಡು ಸಾಮಾಜಿಕ ಮೌಲ್ಯವನ್ನು ಕಾಪಾಡಬೇಕು ಎಂದರು.
ಮನುಷ್ಯ ಸರಳ ಜೀವನವನ್ನು ರೂಢಿಸಿಕೊಳ್ಳಬೇಕು. ನಾವೆಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕು, ಕೆಂಪೇಗೌಡರ ನಾಡು ಮಾಗಡಿಯಲ್ಲಿನ ಶಿವನ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಶುದ್ಧ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹೈಟೆಕ್ ಸಂಸ್ಕೃತಿಯಿಂದ ನೀರು, ಗಾಳಿ, ಆಕಾಶ ಹಾಳಾಗಿದೆ. ಸರಳ ಬದುಕು ರೂಢಿಸಿಕೊಳ್ಳಿ ಎಂದರು.
ಅರಸಿಕೆರೆ ಮಾಡಾಳು ನಿರಂಜನ ಪೀಠ ರುದ್ರಮುನಿ ಸ್ವಾಮೀಜಿ ಮಾತನಾಡಿ, ಸತ್ಯ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡರೆ ಜೀವನ ಸ್ವರ್ಗಮಯವಾಗುತ್ತದೆ, ಕೂಡಿಟ್ಟ ಹಣ ಪರರಪಾಲಾಗುತ್ತದೆ. ದಾನ ಮಾಡಿದರೆ ಜೀವನ ಅಸನಾಗುತ್ತದೆ ಎಂದರು.
ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ಗೌಡ ರುದ್ರಮುನೇಶ್ವರ ಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಕಾಂಗ್ರೆಸ್ ಮುಖಂಡೆ ಶೈಲಜಾ ವೆಂಕಟೇಶ್ ಮಾತನಾಡಿದರು.
ಬಿಡದಿ ಮಠದ ಶ್ರೀ ಹುಚ್ಚಪ್ಪ ಸ್ವಾಮೀಜಿ, ಕಿರಿಯ ಶ್ರೀ ಓಂಕಾರ ಸ್ವಾಮೀಜಿ, ವೀರಶೈವ ಬ್ಯಾಂಕ್ ನಿರ್ದೇಶಕರಾದ ಶಿವರಾಜು, ಎಂ.ಎಸ್.ಸಿದ್ದಲಿಂಗೇಶ್ವರ್, ವಕೀಲ ಪ್ರಕಾಶ್, ಎಂ.ಎಸ್. ಉಮಾಮಹೇಶ್ವರ, ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಆನಂದ್, ಗೌರವಾಧ್ಯಕ್ಷ ಆಚಾರಿ ಮಂಜುನಾಥ್, ತಾಲೂಕು ಅಧ್ಯಕ್ಷ ವೆಂಕಟೇಶ್, ಮಹದೇವಸ್ವಾಮಿ, ಗ್ರಾಪಂ ಸದಸ್ಯ ಶಿವಕುಮಾರ್, ಕೆ.ಮಲ್ಲಣ್ಣ, ಹಂಸ ಮೆಡಿಕಲ್ ಮೋಹನ್, ಬಸವರಾಜಪ್ಪ, ವೀರಲಿಂಗಯ್ಯ, ಶಶಿಧರ್ ಇತರರು ಇದ್ದರು.