

ನರೇಗಲ್ಲ: ಶಿವರಾತ್ರಿ ಹಬ್ಬವು ನಮ್ಮ ಮನದ ಕತ್ತಲೆ ಹೊಡೆದೋಡಿಸಿ ಜ್ಞಾನ ವೃದ್ಧಿಸುವ ಹಬ್ಬವಾಗಿದೆ. ಇಂದಿನ ದಿನ ಉಪವಾಸ ಮತ್ತು ಜಾಗರಣೆ ಮೂಲಕ ಶಿವನನ್ನು ಒಲಿಸಿಕೊಳ್ಳುವ ಕಾರ್ಯ ಮಾಡುತ್ತೇವೆ. ಪರಶಿವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಬುಧವಾರ ಸಂಜೆ ಪ್ರದರ್ಶಿಸಲಾದ 45 ಅಡಿಯ ಬಲೂನ್ ಶಿವಲಿಂಗದ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ವಿುಕರು ಊರಿನ ಸ್ವಚ್ಛತೆಯ ಬಗ್ಗೆ ದಿನದ 24 ಗಂಟೆಯೂ ಶ್ರಮಿಸುತ್ತಾರೆ. ಅಂತಹ ಪೌರ ಕಾರ್ವಿುಕರನ್ನು ಸನ್ಮಾನಿಸಿರುವುದು ಸಂತಸ ನೀಡಿದೆ ಎಂದರು.
ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಶಿವರಾತ್ರಿಯನ್ನು ಜಗತ್ತಿನಾದ್ಯಂತ ಆಚರಿಸುತ್ತಾರೆ. ಈ ಸಮಯದಲ್ಲಿ ನಾವು ವಾತಾವರಣದಲ್ಲಿ ಬದಲಾವಣೆ ಕಾಣುತ್ತೇವೆ. ಚಳಿ ಕಡಿಮೆಯಾಗಿ, ಬಿಸಿಲು ಹೆಚ್ಚಾಗುವ ಸಂದರ್ಭವಿದು. ಈ ಸಮಯದಲ್ಲಿ ಶಿವನ ಭಜನೆ, ಸ್ಮರಣೆ ಮನಸಿಗೆ ಆನಂದ ನೀಡುತ್ತದೆ. ನಮ್ಮ ದೇಹ ರಚನೆಯೇ ಹಲವಾರು ರಾಸಾಯನಿಕಗಳಿಂದ ಕೂಡಿದೆ. ವಾತಾವರಣ ಬದಲಾದಂತೆ ಈ ದೇಹದಲ್ಲಿಯೂ ಬದಲಾವಣೆಗಳಾಗುತ್ತವೆ. ಶರೀರ ಎಲ್ಲದಕ್ಕೂ ಒಗ್ಗಿಕೊಳ್ಳುವ ಶಕ್ತಿ ನೀಡು ಎಂದು ಶಿವರಾತ್ರಿಯಂದು ನಾವು ಶಿವನ ಪೂಜೆ ಮಾಡುತ್ತೇವೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ಸಂಚಾಲಕಿ ಬಿ.ಕೆ. ಸವಿತಕ್ಕ ಈಶ್ವರೀಯ ಸಂದೇಶ ನೀಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ, ಕೆಜಿಎಂಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ, ಎಸ್ಡಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಬಂಡಿವಡ್ಡರ, ಮುಖ್ಯ ಶಿಕ್ಷಕಿ ಲಲಿತಾ ಮ್ಯಾಗೇರಿ, ಮುಖ್ಯ ಶಿಕ್ಷಕ ಬಿ.ಬಿ. ಕುರಿ, ದೈಹಿಕ ನಿರ್ದೇಶಕ ಆರ್.ಎಸ್. ನರೇಗಲ್ಲ, ಎಂ.ಎಸ್. ಪೂಜಾರ, ಗಿರಿಜಾ ಪೂಜಾರ ಮತ್ತಿತರರು ಇದ್ದರು. ಶಿಕ್ಷಕಿ ಶ್ವೇತಾ ಕೊಟಗಿ ನಿರೂಪಿಸಿದರು. ಶಿಕ್ಷಕ ರವಿ ದೇವರೆಡ್ಡಿ ವಂದಿಸಿದರು.