

ಮಂಡ್ಯ: ನಾಗಮಂಗಲ ತಾಲೂಕು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಹಬ್ಬದ ದಿನವಾದ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಅದರಲ್ಲೂ ಶಿವರಾತ್ರಿ ಪ್ರಯುಕ್ತ ಜಗದ್ಗುರು ಡಾ.ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಸರ್ವಾಲಂಕೃತ ಸಿದ್ಧಸಿಂಹಾಸನದ ಮೇಲೆ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠಗಳ ಸ್ವಾಮೀಜಿಗಳು ಕೂಡ ಉಪಸ್ಥಿತರಿದ್ದು, ಮಹಾ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಶ್ರೀಕ್ಷೇತ್ರದಲ್ಲಿ ಶಿವರಾತ್ರಿ ಪ್ರಯುಕ್ತ ಷೋಡಶೋಪಚಾರ ಪೂಜಾ ಕೈಂಕರ್ಯಗಳು ನೆರವೇರಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವರಾತ್ರಿ ಪೂಜೆ-ಪುರಸ್ಕಾರ, ಜಾಗರಣೆಗಳಲ್ಲಿ ಪಾಲ್ಗೊಂಡರು.