ತುಳುಲಿಪಿಯಲ್ಲಿ ಶಿವಪಂಚಾಕ್ಷರಿ ಬರವಣಿಗೆ

Bdk_Ethadka
Published on

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.11ರಿಂದ 16 ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಲಿದ್ದು, ಜೀರ್ಣೋದ್ಧಾರ ಸಮಿತಿ ಶಿವ ಪಂಚಾಕ್ಷರಿ ಲೇಖನ ಯಜ್ಞ ಮುನ್ನಡೆಸಲು ನಿರ್ಧರಿಸಿದ್ದು ಇದರ ಪೂರ್ವಭಾವಿ ಸಭೆ ಭಾನುವಾರ ನಡೆಯಿತು.

ಜೈ ತುಳುನಾಡ್ ಕಾಸರಗೋಡು ವಲಯ ಸಮಿತಿಯನ್ನು ತುಳು ಲಿಪಿಯಲ್ಲಿ ಶಿವ ಪಂಚಾಕ್ಷರಿಯನ್ನು ಕಲಿಸಿಕೊಡಬೇಕಾಗಿ ಆಹ್ವಾನಿಸಿದ್ದರು. ಇದರ ಉದ್ಘಾಟನಾ ಕಾರ್ಯಕ್ರಮ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಆಡಳಿತ ಮೊಕ್ತೇಸರ ವೈ.ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ಜರುಗಿತು. ಯಕ್ಷಗುರು ಮದಂಗಲ್ಲು ಆನಂದ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು

ತುಳು ಲಿಪಿ ಶಿಕ್ಷಕಿ ವಿನೋದ ಪ್ರಸಾದ್ ರೈ ತುಳುಲಿಪಿಯ ಬಗ್ಗೆ ಮಾಹಿತಿ ನೀಡಿ, ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿಯನ್ನು ತುಳು ಲಿಪಿಯಲ್ಲಿ ಬರೆದು ತೋರಿಸುವ ಮೂಲಕ ತುಳು ಲಿಪಿ ಶಿವ ಪಂಚಾಕ್ಷರಿ ಲೇಖನ ಯಜ್ಞಕ್ಕೆ ಚಾಲನೆ ನೀಡಿದರು. ಜೈ ತುಳುನಾಡ್‌ನ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸಂಘಟನೆ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.

ಕ್ಷೇತ್ರದಲ್ಲಿ ತುಳುಲಿಪಿ ನಾಮಫಲಕವನ್ನು ಅಳವಡಿಸಲು ಸಮಿತಿಯ ಅಧ್ಯಕ್ಷರಿಗೆ ನೀಡಲಾಯಿತು. ಡಾ.ಕೃಷ್ಣಮೂರ್ತಿ ವೈ.ವಿ. ಸ್ವಾಗತಿಸಿ, ಜೈ ತುಳುನಾಡ್ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷೆ ಕುಶಲಾಕ್ಷಿ ವಿ.ಕಣ್ವತೀರ್ಥ ವಂದಿಸಿದರು. ಕ್ಷೇತ್ರದ ಮಹಿಳಾ ಘಟಕದ ಸದಸ್ಯರ ಪ್ರಾರ್ಥಿಸಿದರು. ಸಮಿತಿ ಸಂಯೋಜಕ ಚಂದ್ರಶೇಖರ ಭಟ್ ಏತಡ್ಕ ನಿರೂಪಿಸಿದರು. ಜೈ ತುಳುನಾಡ ಸದಸ್ಯರಾದ ಕವಿ ವಿಜಯರಾಜ್ ಪುಣಿಂಚತ್ತಾಯ, ಕಾರ್ತಿಕ್ ಬದಿಯಡ್ಕ, ಉತ್ತಮ್ ನೀರ್ಚಾಲು, ಜಗನ್ನಾಥ ಕುಲಾಲ್ ಬದಿಯಡ್ಕ ಸಹಕರಿಸಿದರು. ಭಕ್ತರು ಭಾಗವಹಿಸಿ ತುಳುಲಿಪಿ ಪಂಚಾಕ್ಷರಿ ಲೇಖನ ಯಜ್ಞದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾಗವಹಿಸಿದ ಎಲ್ಲರಿಗೂ ಕ್ಷೇತ್ರದ ಸಮಿತಿಯ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು. ಜೈ ತುಳುನಾಡ್ ವತಿಯಿಂದ ಎಲ್ಲರಿಗೂ ತುಲು ಲಿಪಿ ಚಾರ್ಟನ್ನು ಉಚಿತವಾಗಿ ಹಂಚಲಾಯಿತು. ಜೈ ತುಳುನಾಡ್ ಸಂಘಟನೆಯ ಸದಸ್ಯರು, ನಾರಂಪಾಡಿ ಉಮಾಮಹೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ತುಳುಲಿಪಿ ನಾಮಫಲಕ ಅಳವಡಿಸಲು ವಿಜ್ಞಾಪನಾ ಪತ್ರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net