ಪುತ್ತೂರು ಗ್ರಾಮಾಂತರ: ಮೆಸ್ಕಾಂ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆ ಸೋಮವಾರ ಕುಂಬ್ರದಲ್ಲಿರುವ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ನಡೆಯಿತು.
ಹಳೆಯ ವಿದ್ಯುತ್ ತಂತಿಗಳಿಂದ ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ತಂತಿ ಬದಲಾವಣೆ ವಾಡಬೇಕೆಂದು ಹೆಚ್ಚಿನ ಗ್ರಾಹಕರು ಅಹವಾಲು ಸಲ್ಲಿಸಿದ್ದಾರೆ.
ಮೆಸ್ಕಾಂ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಕಷ್ಣರಾಜ್ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಸಿ.ಎಚ್., ಸಹಾಯಕ ಇಂಜಿನಿಯರ್‌ಗಳಾದ ಗುರುದೇವಿ ಮಂತ್ರಣ್ಣನವರ್, ಪುತ್ತೂರು ನಗರ ಸಹಾಯಕ ಇಂಜಿನಿಯರ್ ರಾಜೇಶ್, ಪುತ್ತೂರು ಶಾಖಾಧಿಕಾರಿ ರಮೇಶ್, ಸಹಾಯಕ ಇಂಜಿನಿಯರ್ ಸ್ಮಿತಾ, ಸಹಾಯಕ ಲೆಕ್ಕಾಧಿಕಾರಿ ರಜನಿ, ಸಹಾಯಕ ಲೆಕ್ಕಾಧಿಕಾರಿ ಸಂಜೀವ, ಕಿರಿಯ ಇಂಜಿನಿಯರ್‌ಗಳಾದ ಕುಂಬ್ರದ ರವೀಂದ್ರ, ಬೆಟ್ಟಂಪಾಡಿಯ ಪುತ್ತು, ಈಶ್ವರಮಂಗಲದ ರಮೇಶ್, ಸವಣೂರು ರಾಜೇಶ್ ಉಪಸ್ಥಿತರಿದ್ದರು.
ಗ್ರಾಹಕರಿಂದ ಒಟ್ಟು 40 ಮನವಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಹೆಚ್ಚಿನ ಮನವಿಗಳು ಹಳೆಯ ತಂತಿ ಬದಲಾವಣೆಗೆ ಸಂಬಂಧಿಸಿದ್ದಾಗಿವೆ. ಮಾಡಾವು ಸಂಪಾಜೆ, ಪಲ್ಲತ್ತಡ್ಕ, ಮುಗೇರು, ಉರ್ವ ಮೊದಲಾದ ಕಡೆಗಳಲ್ಲಿ ವಿದ್ಯುತ್ ತಂತಿ ಬದಲಾವಣೆ ಮಾಡುವಂತೆ ಗ್ರಾಹಕರು ಮನವಿ ಸಲ್ಲಿಸಿದ್ದಾರೆ. ಸಂತೋಷ್‌ನಗರ, ಬೊಳ್ಳಾಡಿ ಮೊದಲಾದ ಕಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಆಗ್ರಹಿಸಿ ಗ್ರಾಹಕರಿಂದ ಮನವಿಗಳು ಬಂದಿವೆ.
ಒಳಮೊಗ್ರು, ಕೆಯ್ಯೂರು, ಬಡಗನ್ನೂರು ಮೊದಲಾದ ಕಡೆಯ ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು. ಕೆಲವು ಮಂದಿ ಕಚೇರಿಗೆ ಖುದ್ದಾಗಿ ಹಾಜರಾಗಿ ಹಾಗೂ ಇನ್ನು ಕೆಲವರು ದೂರವಾಣಿ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.