ಮಕ್ಕಳ ಶಿಕ್ಷಣಕ್ಕೆ ಕಾರ್ಮಿಕರು ಗಮನಹರಿಸಲಿ | Labours Day
ತೀರ್ಥಹಳ್ಳಿ ಪಪಂಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ಲಕ್ಷ್ಮಮ್ಮ ಮೂಲಕ ದೀಪ ಬೆಳಗಿಸಿ ಉಧ್ಘಾಟನೆ ನೆರವೇರಿಸಿದರು. ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾರಮೇಶ್, ಮುಖ್ಯಾಧಿಕಾರಿ ಡಿ.ರಾಜು ಇದ್ದರು.
ತೀರ್ಥಹಳ್ಳಿ: ದಿನನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ಸಹ ಎಲ್ಲರಂತೆಯೇ ಅವರ ಬದುಕು ಕೂಡಾ ಹಸನಾಗಬೇಕು. ಸರ್ಕಾರ ಪೌರ ಕಾರ್ಮಿಕರ ಮಕ್ಕಳಿಗೆ ವಿಶೇಷ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಅಭಿಪ್ರಾಯಪಟ್ಟರು.
ಸರ್ಕಾರ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ವರ್ಷಕ್ಕೊಮ್ಮೆ ನಡೆಯುವ ದಿನಾಚರಣೆಯಲ್ಲಿ ಕಾರ್ಮಿಕರ ಬಗ್ಗೆ ಮೆಚ್ಚುಗೆಯ ಮಾತು ಹೇಳಿದರೆ ಸಾಲದು. ಇಂದಿಗೂ ಕೆಲವರಿಗೆ ವಸತಿ ಸೌಕರ್ಯ ಸೇರಿ ಅಗತ್ಯ ಸೌಲಭ್ಯಗಳ ಕೊರತೆ ಇದೆ. ತಮ್ಮ ಕುಟುಂಬದ ಸುಖವನ್ನು ಕಡೆಗಣಿಸಿ ವರ್ಷಪೂರ್ತಿ ಪಟ್ಟಣದ ಸ್ವಚ್ಛತೆಯೊಂದಿಗೆ ಜನತೆಗೆ ಮೂಲ ಸೌಕರ್ಯವನ್ನು ಒದಗಿಸುವ ಕೆಲಸ ಮಾಡುತ್ತಾರೆ. ಅವರ ಒಳಿತಿಗೆ ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ಜನಸೇವೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಪೌರ ಕಾರ್ಮಿಕರ ಬದುಕು ನಿಸ್ವಾರ್ಥದಿಂದ ಕೂಡಿದೆ. ಮುಂದುವರಿದ ಈ ಕಾಲಘಟ್ಟದಲ್ಲೂ ಕಾರ್ಮಿಕರು ಕನಿಷ್ಠ ವೇತನದಲ್ಲಿ ಕೆಲಸ ಮಾಡುತ್ತಿರುವುದು ನಾಗರಿಕ ವ್ಯವಸ್ಥೆಗೆ ಶೋಭೆಯಲ್ಲ. ಈ ವರ್ಗದ ಬಗ್ಗೆ ಸಾರ್ವಜನಿಕರ ಭಾವನೆಯೂ ಬದಲಾಗಬೇಕಿದೆ. ಅವರ ಕುಟುಂಬಗಳೂ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಮಾತನಾಡಿ, ಪಟ್ಟಣದ ಘನತೆಯನ್ನು ಎತ್ತಿ ಹಿಡಿಯುವಂತೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರ ಹಿತವನ್ನು ಕಾಯುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು.
ಸದಸ್ಯರು ಕೂರುವ ಆಸನಗಳಲ್ಲಿ ಪೌರಕಾರ್ಮಿಕರನ್ನು ಕೂರಿಸಿದ್ದು ಗಮನಾರ್ಹವಾಗಿತ್ತು. ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆಸಲಾದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ರಾಜು ಇತರರಿದ್ದರು.