ಸೊರಬದಲ್ಲಿ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮೋಹನ್ ಮಾತನಾಡಿದರು. ದಿವಾಕರ, ಉಷಾ, ದಾನಪ್ಪ, ಪದ್ಮಾವತಿ ಇತರರಿದ್ದರು.
ಸೊರಬ: ಸರ್ಕಾರದಿಂದ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದು ಕರ್ನಾಟಕ ರಾಜ್ಯ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಉದ್ದೇಶ. ನಕಲಿ ಕಾರ್ಡುಗಳ ಪ್ರಭಾವದಿಂದಾಗಿ ನಿಜವಾದ ಫಲಾನುಭವಿಗಳಿಗೆ ಸರಿಯಾದ ಸವಲತ್ತುಗಳು ದೊರೆಯುತ್ತಿಲ್ಲ. ಸಂಘಟನೆ ಪ್ರಬಲವಾಗಿದ್ದರೆ ಇದನ್ನು ತಡೆಗಟ್ಟಲು ಸಾಧ್ಯವಿದೆ. ಮಾಹಿತಿ ಕೊರತೆಯಿಂದಾಗಿ ಅರ್ಹರು ಸೌಲಭ್ಯದಿಂದ ವಂಚಿತರಾಗಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ವ್ಯವಸ್ಥೆ, 8 ಲಕ್ಷ ರೂ. ಅಪಘಾತ ವಿಮೆ ಇದೆ. ಸುಮಾರು 20ರಿಂದ 30 ಸೌಲಭ್ಯಗಳು ಕಾರ್ಮಿಕ ಇಲಾಖೆಯಲ್ಲಿ ದೊರೆಯುತ್ತವೆ ಎಂದರು.
ಮನರೇಗಾ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ ಪ್ರಭಾಕರ ಹೊಸಬಾಳೆ ಮಾತನಾಡಿ, ಕಾರ್ಮಿಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಶ್ರಮಿಕ ವರ್ಗ. ದುಡಿಯುವ ಕೈಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನ್ಯಾಯಯುತವಾಗಿ ತಲುಪುವಂತೆ ಮಾಡಬೇಕಿದೆ. ನಿಜವಾದ ಕಾರ್ಮಿಕ ಸೌಲಭ್ಯ ವಂಚಿತನಾಗಿದ್ದಾನೆ. ಅಂತಹ ಕಾರ್ಮಿಕರಿಗೆ ಜಾಗೃತಿ ಮತ್ತು ಮಾಹಿತಿ ನೀಡಿ ಸೌಲಭ್ಯ ದೊರೆಯುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವಾಕರ ಮಾತನಾಡಿ, ಇಲಾಖೆ ಎಂದಿಗೂ ಕಾರ್ಮಿಕರ ಪರವಾಗಿರಲಿದೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ವಿವಾಹಕ್ಕೆ ಸಂಬಂಧಿಸಿ ಅನೇಕ ಹಣಕಾಸಿನ ಸೌಲಭ್ಯಗಳಿವೆ ಎಂದರು.