ಜನಮೆಚ್ಚುವಂತೆ ಕೆಲಸ ಮಾಡಿ | Teachers' Association

ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಕಾರ್ಯಕ್ರಮವನ್ನು ಪ್ರಭಾರ ಬಿಇಒ ಓಂಕಾರಪ್ಪ ಉದ್ಘಾಟಿಸಿದರು. ಮಾಲತೇಶಪ್ಪ, ಭೂಮೇಶ್, ಲಕ್ಷ್ಮಣ್ ನಾಯ್ಕ, ಡಾ. ಅನ್ನಪೂರ್ಣಾ ಇತರರಿದ್ದರು.
ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಕಾರ್ಯಕ್ರಮವನ್ನು ಪ್ರಭಾರ ಬಿಇಒ ಓಂಕಾರಪ್ಪ ಉದ್ಘಾಟಿಸಿದರು. ಮಾಲತೇಶಪ್ಪ, ಭೂಮೇಶ್, ಲಕ್ಷ್ಮಣ್ ನಾಯ್ಕ, ಡಾ. ಅನ್ನಪೂರ್ಣಾ ಇತರರಿದ್ದರು.
Published on
ಸಾಗರ: ಶಿಕ್ಷಕನಾದವನು ಮಕ್ಕಳ ಮನಸ್ಸು ಗೆಲ್ಲುವ ಜತೆಗೆ ಪಾಲಕರ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು. ಅನೇಕ ಸಂದರ್ಭದಲ್ಲಿ ಮಕ್ಕಳು ಪಾಲಕರನ್ನೇ ಅನುಸರಿಸುವುದರಿಂದ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಪಾಲಕರಲ್ಲಿ ಶಿಕ್ಷಕರು ಅರಿವು ಮೂಡಿಸಬೇಕು ಎಂದು ಪ್ರಭಾರ ಬಿಇಒ ಓಂಕಾರಪ್ಪ ಹೇಳಿದರು.
ಸಾಗರದ ಬ್ರಾಸಂ ಸಭಾಂಗಣದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮತ್ತು ಮಕ್ಕಳು ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು, ಸವಾಲುಗಳ ನಡುವೆಯೇ ಶಿಕ್ಷಕನಾದವನು ಜನಮೆಚ್ಚುವಂತೆ ಕಾರ್ಯ ನಿರ್ವಹಿಸಬೇಕು ಎಂದರು.
ನಮ್ಮಿಂದ ಅಕ್ಷರ ಕಲಿತವರು ಇವರು ನಮ್ಮ ಶಿಕ್ಷಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಈ ಅವಕಾಶ ಇತರೆ ವೃತ್ತಿಯಲ್ಲಿದ್ದವರಿಗೆ ಸಿಗುವುದಿಲ್ಲ. ಶಿಕ್ಷಕರ ಸಂಘದ ಪದಾಧಿಕಾರಿಗಳು ಅನೇಕ ಯೋಜನೆಗಳನ್ನು ಮುಂದಿಟ್ಟುಕೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮುಖವಾಗಿ ಗುರುಭವನ ಪೂರ್ಣಗೊಳಿಸುವ ಯೋಜನೆಗೆ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
ತಾಲೂಕು ಸಂಘದ ನೂತನ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಳಿತು ಮಾಡಬೇಕು ಎಂಬ ಉದ್ದೇಶವಿರುವ ನಮ್ಮ ತಂಡವನ್ನು ಸಮಸ್ತ ಶಿಕ್ಷಕರು ಬೆಂಬಲಿಸಿ ಅವಕಾಶ ಕೊಟ್ಟಿದ್ದಾರೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ‘ಸದ್ಗುರು ಶಿಕ್ಷಕರ ಕಾರ್ನರ್’ ಆರಂಭಿಸಿದ್ದು ಹೆಚ್ಚು ಅನುಕೂಲವಾಗಿದೆ ಎಂದರು.
 ಗುರುಭವನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಾಗಾಗಿ ಸುಮಾರು 2ರಿಂದ 3 ಕೋಟಿ ರೂ. ವೆಚ್ಚದಲ್ಲಿ ಗುರುಭವನ ಕಾಮಗಾರಿ ಮುಗಿಸುವ ಸಂಕಲ್ಪ ಮಾಡಿದ್ದೇವೆ. ಹಣ ಕೊಡಿ ಎಂದು ಶಿಕ್ಷಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ಅನೇಕ ಶಿಕ್ಷಕರು ಸ್ವಯಂಪ್ರೇರಿತವಾಗಿ ಹಣ ಕೊಡಲು ಸಿದ್ಧರಿದ್ದಾರೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ, ಪ್ರಮುಖರಾದ ರಾಜಶೇಖರ ಶೆಟ್ಟಿ, ಭೂಕೇಶ್ವರಪ್ಪ, ಡಾ. ಅನ್ನಪೂರ್ಣಾ, ರಮೇಶ್, ಚಂದ್ರಪ್ಪ, ವಿಕ್ಟೋರಿಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net