ಭದ್ರಾವತಿಯಲ್ಲಿ ಏರ್ಪಡಿಸಿದ್ದ ಶಾಶ್ವತಿ ಮಹಿಳಾ ಸಮಾಜದ ವಾರ್ಷಿಕೋತ್ಸವ ಸಮಾರಂಭವನ್ನು ವೈದ್ಯೆ ಜೆ.ಎಂ.ಪ್ರೀತಿ ಉದ್ಘಾಟಿಸಿದರು. ರೂಪಾ ರಾವ್, ಯಶೋದಾ, ವಿಜಯಾ, ಶಾರದಾ ಇತರರಿದ್ದರು.
Published on:
Copied
Follow Us
ಭದ್ರಾವತಿ: ಮಹಿಳೆಯರು ಒಟ್ಟಾಗಿ ನಿಂತರೆ ಕುಟುಂಬ ಮಾತ್ರವಷ್ಟೇ ಅಲ್ಲ, ಸಂಪೂರ್ಣ ಸಮಾಜವೇ ಬಲಿಷ್ಠ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹಳೇನಗರ ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ವೈದ್ಯೆ ಜೆ.ಎಂ.ಪ್ರೀತಿ ಹೇಳಿದರು.
ಪಟ್ಟಣದ ಸಿದ್ದಾರೂಢ ನಗರದಲ್ಲಿರುವ ಶ್ರೀ ಶಂಕರಮಠದಲ್ಲಿ ಶಾಶ್ವತಿ ಮಹಿಳಾ ಸಮಾಜ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳಾ ಸಮಾಜಗಳು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುತ್ತವೆ. ಅವುಗಳು ಸಮಾಜದ ಸಂದೇಶ ವಾಹಕಗಳೂ ಹೌದು. ಆ ಮೂಲಕ ಸಮಾಜದ ಅಶಾಂತಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದರು.
ಸಂಘ ಸಂಸ್ಥೆಗಳಲ್ಲಿರುವ ಎಲ್ಲ ಸದಸ್ಯರು ಐಕ್ಯತೆ, ಶಿಸ್ತು, ಒಗ್ಗಟ್ಟನ್ನು ಕಾಪಾಡಿಕೊಂಡರೆ ಯಾವ ಮಟ್ಟಿಗಾದರೂ ಬೆಳೆಯಲು ಸಾಧ್ಯ. ಸಾಧನೆ ಮಾಡುವ ಛಲ ಇರುವ ಮಹಿಳೆಯರಿಗೆ ಅವರ ಕುಟುಂಬದಲ್ಲಿ ಸಹಾಯ, ಸಹಕಾರ, ಪ್ರೋತ್ಸಾಹ ಸಿಕ್ಕರೆ ಅವರು ಉನ್ನತ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ವಾರ್ಷಿಕೋತ್ಸವ ನಿಮಿತ್ತ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಅದೃಷ್ಟದ ಮಹಿಳೆಯಾಗಿ ಲೀಲಾ ರಾಮೇಗೌಡ ಲಾಟರಿ ಮೂಲಕ ಆಯ್ಕೆಯಾದರು. ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪಾ ರಾವ್, ಯಶೋದಾ ವೀರಭದ್ರಪ್ಪ, ವಿಜಯಾ ಜಗನ್ನಾಥ್, ಶಾರದಾ ಶ್ರೀನಿವಾಸ್ ಇತರರಿದ್ದರು.