ಭದ್ರಾವತಿ: ಮಹಿಳೆಯರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧಾ ಪಟೇಲ್ ಹೇಳಿದರು.
ರೋಟರಿ ಕ್ಲಬ್ ಸಭಾಂಗಣದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ಆಯೋಜಿಸಿದ್ದ ಸರ್ವ ಸದಸ್ಯೆಯರ ವಾರ್ಷಿಕ ಮಹಾಸಭೆ ಹಾಗೂ ಮಹಿಳೆಯರಿಗೆ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಒಟ್ಟಾಗಿ ಸಂಘಟಿತರಾಗುವ ಜತೆಯಲ್ಲಿ ವೇದಿಕೆ ರೂಪಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಮಾದರಿ. ಮಹಿಳೆಯರು ಪ್ರತಿಭೆ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಸಿ. ಹಂಚಿನಾಲ್ ಮಾತನಾಡಿ, ಮಹಿಳೆಯರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಿತ್ಯ ಕೆಲಸದ ನಡುವೆ ಆರೋಗ್ಯದ ಕಡೆಗೂ ಗಮನಹರಿಸಬೇಕು. 40 ವರ್ಷದ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ ಗರ್ಭಕೋಶದ ತೊಂದರೆ ಹಾಗೂ ಸ್ತನ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಬೇಗ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಕಾರ್ಯದರ್ಶಿ ಪ್ರತಿಭಾ, ಖಜಾಂಚಿ ಭಾರತಿಕುಮಾರ್, ಪುಷ್ಪಾ ಕೇಶವಮೂರ್ತಿ, ಶೀಲಾ ರವಿ, ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಆರ್.ಕೇಶವಮೂರ್ತಿ, ದುಷ್ಯಂತ್‌ರಾಜ್ ಇತರರಿದ್ದರು.