ಬಿಡದಿ ಟೌನ್‌ಶಿಪ್‌ಗೆ ಅನುಮೋದನೆ ಹಿಂಪಡೆಯಲಿ I bidadi township

 ಎಚ್.ಆರ್.ಬಸವರಾಜಪ್ಪ, ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ
ಎಚ್.ಆರ್.ಬಸವರಾಜಪ್ಪ, ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹ
  • ಯೋಜನೆ ರೈತ ವಿರೋಧಿಯಾಗಿದೆ ಎಂದು ಆಕ್ರೋಶ
ಶಿವಮೊಗ್ಗ: ರಾಜ್ಯ ಸಚಿವ ಸಂಪುಟವು ರಾಮನಗರ ಜಿಲ್ಲೆಯಲ್ಲಿ ಬಿಡದಿ (bidadi) ಟೌನ್‌ಶಿಪ್ (township) ಯೋಜನೆಗೆ ನೀಡಿರುವ ಅನುಮೋದನೆ ಹಿಂಪಡೆಯಬೇಕೆಂದು ರೈತ ಸಂಘ (raita sangha) ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿಯಾಗಿದೆ. ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿಯಾಗಿದೆ. ಸುಮಾರು 9,640 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಈಗಾಗಲೇ ಸಂಪುಟ ಅನುಮೋದನೆಯೂ ಸಿಕ್ಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಬೈರಹೊಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ 25 ಗ್ರಾಮಗಳ ನೀರಾವರಿ ಕೃಷಿ ಜಮೀನನ್ನು ಟೌನ್‌ಶಿಪ್‌ಗೆ ಬಳಸಿಕೊಳ್ಳಲಾಗುತ್ತಿದೆ. ತೆಂಗು, ಅಡಿಕೆ, ಬಾಳೆ, ಮಾವು ಸೇರಿ ತೋಟಗಾರಿಕೆ ಬೆಳೆಗಳು ಈ ಭೂಮಿಯಲ್ಲಿವೆ. ಇಂತಹ ಭೂಮಿಯಲ್ಲಿ ಟೌನ್‌ಶಿಪ್ ಮಾಡುವುದು ಸರಿಯಲ್ಲ. ಇದೂ ಭೂಮಾಫಿಯಾಕ್ಕೆ ಎಡೆಮಾಡಿಕೊಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
2012ರಲ್ಲಿ ಕೆಐಎಡಿಬಿ ಮೂಲಕ ಮಿತ್ತಲ್ ಕಂಪನಿಗಾಗಿ ಅಂದಿನ ಸರ್ಕಾರ 12,500 ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿತ್ತು. ಆದರೆ 15 ವರ್ಷವಾದರೂ ಯಾವುದೇ ಕೈಗಾರಿಕೆಯನ್ನು ಅಲ್ಲಿ ಸ್ಥಾಪಿಸಿಲ್ಲ. ಒಳಒಪ್ಪಂದವಾಗಿ ಅನ್ಯ ಉದ್ದೇಶಕ್ಕಾಗಿ ಜಿಂದಾಲ್ ಕಂಪನಿಗೆ ಇದೇ ಭೂಮಿ ಮಾರಾಟ ಮಾಡಲು ಹೊರಟಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟರು.
ಮೈಸೂರು ಸಮೀಪದ ವರುಣಾ ಹೋಬಳಿಯ ಗುಡ್ಡಮಾದನಹಳ್ಳಿ ಗ್ರಾಮದ ನೀರಾವರಿ ಕೃಷಿಭೂಮಿಯಲ್ಲಿದ್ದ ರೈತರನ್ನು ಒಕ್ಕಲೆಬ್ಬಿಸಿ, ನಿಮ್ಹಾನ್ಸ್ ಆಸ್ಪತ್ರೆ ನಿರ್ಮಿಸುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು. ಮೈಸೂರಿನಲ್ಲಿಯೇ ಸಾಕಷ್ಟು ಸರ್ಕಾರಿ ಭೂಮಿ ಇದೆ. ಅಲ್ಲಿಯೇ ಆಸ್ಪತ್ರೆ ನಿರ್ಮಿಸಲಿ ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ನಾರಾಯಣ, ಹನುಮಮ್ಮ, ಟಿ.ಎಂ.ಚಂದ್ರಪ್ಪ, ಸಿ.ಚಂದ್ರಪ್ಪ, ಹನುಮಂತಪ್ಪ, ಷಣ್ಮುಖಪ್ಪ, ಮಂಜಪ್ಪ, ಟಿ.ಎಚ್.ಹಾಲೇಶಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net