ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ | Press Day Celebration
ಶಿಕಾರಿಪುರದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವೈ.ಗ.ಜಗದೀಶ್ ಅವರನ್ನು ಗೌರವಿಸಲಾಯಿತು. ನವೀನ್‌ಕುಮಾರ್, ವೈದ್ಯನಾಥ್, ಕೆ.ಎಸ್.ಹುಚ್ರಾಯಪ್ಪ, ಎನ್.ರವಿಕುಮಾರ್, ಮಂಜುನಾಥ್ ಮಠದ್ ಇತರರಿದ್ದರು.
ಶಿಕಾರಿಪುರ: ಪತ್ರಿಕೋದ್ಯಮದಲ್ಲಿ ಅಧ್ಯಯನ, ವಾಸ್ತವ ಮತ್ತು ನಿರಂತರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಮಾಜಿಕ ಜಾಲತಾಣಗಳ ವೇಗಕ್ಕೆ ತಕ್ಕಂತೆ ಮುದ್ರಣ ಮಾಧ್ಯಮ ಓಡಬೇಕಿದೆ. ಇದಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ವೈ.ಗ.ಜಗದೀಶ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದಾಗಿ ಪತ್ರಿಕೋದ್ಯಮ ಕ್ಷೇತ್ರ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದೆ. ತಪ್ಪು ಮಾಹಿತಿಗಳು ಮತ್ತು ನಕಲಿ ಸುದ್ದಿಗಳ ಹಾವಳಿಯಿಂದಾಗಿ ಸತ್ಯವನ್ನು ಪತ್ತೆಹಚ್ಚುವುದು ಮತ್ತು ಸಾರ್ವಜನಿಕರಿಗೆ ನಿಖರ ಮಾಹಿತಿ ತಲುಪಿಸುವುದು ದೊಡ್ಡ ಸವಾಲಾಗಿದೆ ಎಂದರು.
ಡಿಜಿಟಲ್ ಯುಗದಲ್ಲಿ, ತಂತ್ರಜ್ಞಾನದ ಅಬ್ಬರದ ನಡುವೆ ಸಾಂಪ್ರದಾಯಿಕ ಪತ್ರಿಕೋದ್ಯಮಕ್ಕೆ ಹಲವು ಸವಾಲುಗಳಿವೆ. ಪತ್ರಕರ್ತರು ಕೇವಲ ಸುದ್ದಿಯನ್ನು ವರದಿ ಮಾಡುವುದಷ್ಟೇ ಅಲ್ಲ, ಅದರ ಹಿಂದಿರುವ ಸತ್ಯಾಸತ್ಯತೆ ಪರಿಶೀಲಿಸುವ ಜವಾಬ್ದಾರಿಯನ್ನೂ ಹೊಂದಿರಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್, ಡಿ.ವಿ.ಗುಂಡಪ್ಪ ಅವರಂತಹ ಮಹನೀಯರು ಪತ್ರಿಕೆಗಳನ್ನು ಸಮಾಜಮುಖಿ ಚಳುವಳಿಗಳಾಗಿ ಬಳಸಿಕೊಂಡಿದ್ದರು. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಜತೆಗೆ ವೃತ್ತಿಪರತೆ ಮತ್ತು ಬದ್ಧತೆ ಕಾಯ್ದುಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ಪತ್ರಿಕೋದ್ಯಮದ ಅಸ್ತಿತ್ವಕ್ಕೆ ಕಂಟಕವಾಗಬಹುದು ಎಂದು ಅಭಿಪ್ರಾಯಪಟ್ಟರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್, ಜಿಲ್ಲಾಧ್ಯಕ್ಷ ವೈದ್ಯನಾಥ್, ಕಾರ್ಯದರ್ಶಿ ಹಾಲಸ್ವಾಮಿ, ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ರಾಜ್ಯನಿರ್ದೇಶಕ ಎನ್.ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಗಾ.ರಾ.ಶ್ರೀನಿವಾಸ್, ತಾಲೂಕು ಕಾರ್ಯದರ್ಶಿ ಮಂಜುನಾಥ್ ಮಠದ್ ಇತರರಿದ್ದರು.