ಭಾರತೀಯ ಸಂಸ್ಕೃತಿ ಶ್ರೀಮಂತಿಕೆಗೆ ವೇದಗಳೇ ಮೂಲಾಧಾರ I indian rich cuture

ಶಿವಮೊಗ್ಗ ರವೀಂದ್ರನಗರ ಶ್ರೀ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಅವರು ಡಾ. ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಶ್ರೀನಿವಾಸಮೂರ್ತಿ ಅವರಿಗೆ ಪ್ರಸನ್ನ ಗಣಪತಿ ಅನುಗ್ರಹ ಪುರಸ್ಕಾರ ಪ್ರದಾನ ಮಾಡಿದರು.
ಶಿವಮೊಗ್ಗ ರವೀಂದ್ರನಗರ ಶ್ರೀ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಅವರು ಡಾ. ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಶ್ರೀನಿವಾಸಮೂರ್ತಿ ಅವರಿಗೆ ಪ್ರಸನ್ನ ಗಣಪತಿ ಅನುಗ್ರಹ ಪುರಸ್ಕಾರ ಪ್ರದಾನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷ್ಣ ಯಜುಃಸಂಹಿತಾ ಯಾಗದ ಪೂರ್ಣಾಹುತಿ
  • ಶಕಟಪುರಂನ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಅಭಿಮತ
  • ಪ್ರಸನ್ನ ಗಣಪತಿ ಅನುಗ್ರಹ ಪುರಸ್ಕಾರ ಪ್ರದಾನ
ಶಿವಮೊಗ್ಗ: ಸನಾತನ ಧರ್ಮದ ಶಾಶ್ವತ ನೆಲೆಯೇ ವೇದಗಳು. (vedas) ಅನಾದಿಕಾಲದಲ್ಲಿ ಋಷಿ ಮುನಿಗಳು ದೀರ್ಘಕಾಲದ ತಪಸ್ಸು, ಸತ್ಯಾನ್ವೇಷಣೆ ಹಾಗೂ ಆತ್ಮ ಸಾಕ್ಷಾತ್ಕಾರದ ಮೂಲಕ ಮಾನವ ಸಮಾಜಕ್ಕೆ ಅಮೂಲ್ಯ ವೇದ ಜ್ಞಾನವನ್ನು ನೀಡಿದ್ದಾರೆ. ಇದು ಭಾರತೀಯ (indian) ಸಂಸ್ಕೃತಿಗೆ (culture) ಮೂಲಾಧಾರ ಎಂದು ಶಕಟಪುರಂನ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಹೇಳಿದರು.
ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕೃಷ್ಣ ಯಜುಃಸಂಹಿತಾ ಯಾಗದ ಪೂರ್ಣಾಹುತಿಯ ಸಾನ್ನಿಧ್ಯ ವಹಿಸಿ, ಪ್ರಸನ್ನ ಗಣಪತಿ ಅನುಗ್ರಹ ಪುರಸ್ಕಾರ ಪ್ರದಾನ ಮಾಡಿ ಆಶೀರ್ವಚನ ನೀಡಿದ ಶ್ರೀಗಳು, ಋಷಿಮುನಿಗಳು ಜಗತ್ತಿನ ಮೂಲತತ್ವ ಕಂಡುಕೊಳ್ಳಲು ತಪಸ್ಸು ಮಾಡುವ ಮೂಲಕ ಜ್ಞಾನ ಸಂಗ್ರಹಿಸಿದ್ದರು. ಅದನ್ನು ನಮಗೆ ವೇದದ ರೂಪದಲ್ಲಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಭಾರತದಲ್ಲಿರುವ ಜ್ಞಾನ ಬೇರೆಲ್ಲೂ ಇಲ್ಲ, ನಮ್ಮಲ್ಲಿ ದೇಹದ ಬಗ್ಗೆ ಚಿಂತನೆ ಇಲ್ಲ, ದೇವರ ಬಗ್ಗೆ ಮಾತ್ರ ಚಿಂತನೆ. ವೇದಮಂತ್ರಗಳು ಜ್ಞಾನರಾಶಿ. ಅವು ಪಠಣಕ್ಕಷ್ಟೇ ಸೀಮಿತವಾಗದೆ, ಅಧ್ಯಯನ, ಅನುಭವ ಮತ್ತು ಆಚರಣೆ ಮೂಲಕ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜಕ್ಕೆ ನಿಜವಾದ ಮಾರ್ಗದರ್ಶನ ನೀಡುತ್ತವೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದ ಪ್ರತ್ಯೇಕವಾಗಿ ಕಂಡರೂ ಮೂಲತಃ ಒಂದೇ. ಪರಬ್ರಹ್ಮ ಜ್ಞಾನರಾಶಿಯ ವಿಭಿನ್ನ ಅಭಿವ್ಯಕ್ತಿಗಳಾಗಿವೆ ಎಂದು ತಿಳಿಸಿದರು.
ಕಲಿಯುಗದಲ್ಲಿ ವೇದಾಧ್ಯಯನ ನಶಿಸಿಹೋಗುತ್ತಿದೆ. ಘೋರ ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆ, ಜಪ, ಯಜ್ಞ ಮತ್ತು ಯಾಗಗಳು ಧರ್ಮರಕ್ಷಣೆ ಹಾಗೂ ಆತ್ಮೋನ್ನತಿಗೆ ಅತ್ಯಂತ ಪರಿಣಾಮಕಾರಿ ಸಾಧನಗಳು. ವೇದ ಪಾರಾಯಣ, ಹೋಮ, ಯಜ್ಞ-ಯಾಗಾದಿಗಳ ಮೂಲಕ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಡಾ. ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಶ್ರೀನಿವಾಸಮೂರ್ತಿ ಅವರಿಗೆ ಪ್ರಸನ್ನ ಗಣಪತಿ ಅನುಗ್ರಹ ಪುರಸ್ಕಾರ ಪ್ರದಾನ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

ಧರ್ಮ ಪ್ರಜ್ಞೆ ಜಾಗೃತವಾಗಲಿ

ನಮ್ಮ ದೇಶದಲ್ಲಿ ಇತ್ತೀಚೆಗೆ ಧರ್ಮ ಎಂದರೇನು ಎಂಬುದನ್ನೇ ಅನೇಕರು ಮರೆಯುತ್ತಿದ್ದಾರೆ. ಅನ್ಯಧರ್ಮೀಯರು ಧರ್ಮಜಾಗೃತಿ ಹೊಂದಿದ್ದರೆ, ಹಿಂದೂಗಳು ಧರ್ಮಜಾಗೃತಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ಧರ್ಮ ಏನು ಎಂಬ ತಿಳಿವಳಿಕೆ ಬಂದರೆ ಸಾರ್ಥಕ್ಯ ಉಂಟಾಗುತ್ತದೆ. ಆತ್ಮಜಾಗೃತಿ ಕಡೆಗೆ ಹೋಗುವ ಮಾರ್ಗ ತಿಳಿಯುತ್ತದೆ. ಅ.ಪ.ರಾಮ ಭಟ್ಟರ ನೇತೃತ್ವದಲ್ಲಿ ದಶಕಗಳಿಂದ ಈ ಕ್ಷೇತ್ರದಲ್ಲಿ ಯಾಗ-ಯಜ್ಞಾದಿಗಳು, ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ. ಶ್ರೀಗಳ ಸಾನ್ನಿಧ್ಯದಲ್ಲಿ ಪುರಸ್ಕಾರ ಪಡೆಯುವ ಭಾಗ್ಯ ಒದಗಿದ್ದು ನನ್ನ ಅದೃಷ್ಟ ಎಂದು ಡಾ. ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.
"

ಯಜ್ಞ-ಯಾಗಗಳು ವೈಯಕ್ತಿಕ ಇಷ್ಟಾರ್ಥಸಿದ್ಧಿಗೆ ಮಾತ್ರವಲ್ಲ. ಲೋಕ ಕ್ಷೇಮ, ಪರಿಸರ ಶುದ್ಧಿ, ಸಮಾಜದ ಶಾಂತಿ ಮತ್ತು ವಿಶ್ವ ಕಲ್ಯಾಣಕ್ಕೂ ಕಾರಣವಾಗುತ್ತವೆ. ಆದ್ದರಿಂದ ಎಲ್ಲರೂ ವೇದ ಸಂಸ್ಕೃತಿ, ವೇದಾಧ್ಯಯನ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.

— ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ, ಶಕಟಪುರಂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net