ಅವೈಜ್ಞಾನಿಕ ವಿಮಾ ಪರಿಹಾರ | Compensation

ಅವೈಜ್ಞಾನಿಕ ಬೆಳೆ ವಿಮೆ ಪರಿಹಾರ ನೀತಿ ಖಂಡಿಸಿ ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ರೈತರು ಪಿಡಿಒ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಚಕ್ರವಾಕ ಸುಬ್ರಹ್ಮಣ್ಯ, ವಿನಾಯಕ, ವಿಶ್ವನಾಥ, ಗೋಪಾಲ ಶೆಟ್ಟಿ ಇತರರಿದ್ದರು.
ಅವೈಜ್ಞಾನಿಕ ಬೆಳೆ ವಿಮೆ ಪರಿಹಾರ ನೀತಿ ಖಂಡಿಸಿ ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ರೈತರು ಪಿಡಿಒ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಚಕ್ರವಾಕ ಸುಬ್ರಹ್ಮಣ್ಯ, ವಿನಾಯಕ, ವಿಶ್ವನಾಥ, ಗೋಪಾಲ ಶೆಟ್ಟಿ ಇತರರಿದ್ದರು.
Published on
ಹೊಸನಗರ: ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡುವುದಿರಲಿ, ಮಳೆಯ ಮಾಹಿತಿ ತೆಗೆದುಕೊಳ್ಳದೆಯೇ ತಮಗೆ ಇಷ್ಟಬಂದಂತೆ ಮಳೆ ಪ್ರಮಾಣ ದಾಖಲು ಮಾಡಿ ಹವಾಮಾನ ಆಧಾರಿತ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿ ಮೂಡುಗೊಪ್ಪ ಗ್ರಾಪಂ ಕಚೇರಿ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿ ಪಿಡಿಒ ರಾಮಚಂದ್ರಪ್ಪಗೆ ಮನವಿ ಸಲ್ಲಿಸಿದರು.
ಮೂಡುಗೊಪ್ಪ ಗ್ರಾಪಂ ಕಚೇರಿ ಮೇಲೆ ಅಳವಡಿಸಲಾದ ಮಳೆಮಾಪನ ಉಪಕರಣ ಕೆಟ್ಟು ಹೋಗಿದೆ. ಅದನ್ನು ನೋಡಲು ಹೋಗಲು ದಾರಿಯೂ ಇಲ್ಲ. ಅಂದಮೇಲೆ ಸೂಕ್ತ ವಿಮಾ ಪರಿಹಾರ ಸಿಗಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಮೂಡುಗೊಪ್ಪದಲ್ಲಿ ಮಳೆ ಹೆಚ್ಚಾಗಿ ಬಿದ್ದಿದೆ. ಆದರೆ ಮಳೆಮಾಪನದಲ್ಲಿ ಅದರ ವಿವರವೇ ಇಲ್ಲ. ಮಾಪನ ಯಂತ್ರಕ್ಕೆ ಕಸಕಡ್ಡಿ ಸಿಲುಕಿ ಜಾಮ್ ಆಗಿದೆ. ಕಚೇರಿ ಮೇಲೆ ಮಳೆ ಮಾಪನ ಉಪಕರಣ ಅಳವಡಿಸಲಾಗಿದೆ. ಆದರೆ ನಿರ್ವಹಣೆ ಮಾಡಲು ಹೋಗುವ ವ್ಯವಸ್ಥೆಯೇ ಇಲ್ಲ. ಸಮಸ್ಯೆ ಶುರುವಾದ ಮೇಲೆ ಏಣಿ ಹಾಕಿಕೊಂಡು ಪರಿಶೀಲಿಸಲಾಗಿದ್ದು. ಅದು ಕೆಟ್ಟು ಹೋಗಿದ್ದು ಗಮನಕ್ಕೆ ಬಂದಿದೆ. ಅಂದಮೇಲೆ ಮಳೆ ಮಾಹಿತಿ ಸಂಗ್ರಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿಮೆ ನೀಡಲು ಬಳಸಿರುವ ಮಳೆ ಮಾಹಿತಿ ಈ ಭಾಗದ್ದು ಅಲ್ಲವೇ ಅಲ್ಲ. ಎಲ್ಲೋ ಕುಳಿತು ದೂರದ ಜೇನಿ ಪಂಚಾಯಿತಿಯ ಮಳೆ ಮಾಹಿತಿಯನ್ನು ಮೂಡುಗೊಪ್ಪಕ್ಕೆ ದಾಖಲು ಮಾಡಿದ್ದು, ಹೆಕ್ಟೇರ್‌ಗೆ ಅತೀ ಕಡಿಮೆ 24350 ರೂ. ವಿಮಾ ಪರಿಹಾರ ನೀಡಲಾಗಿದೆ. ಬೇಕಾಬಿಟ್ಟಿ ಮಾಹಿತಿ ದಾಖಲು ಮಾಡಿದ ಅಧಿಕಾರಿ ಮತ್ತು ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ, ಕೃಷಿಕ ಸಮಾಜದ ನಿರ್ದೇಶಕ ವಿನಾಯಕ, ಗ್ರಾಪಂ ಸದಸ್ಯ ವಿಶ್ವನಾಥ, ಸೊಸೈಟಿ ಉಪಾಧ್ಯಕ್ಷ ಗೋಪಾಲ ಶೆಟ್ಟಿ, ಪ್ರಮುಖರಾದ ಪರ್ವತ ಗೌಡ, ಮಧು, ಸುಬ್ರಹ್ಮಣ್ಯ, ಸುನಿಲ್ ಉಡುಪ, ಹರೀಶ, ನಾರಾಯಣ ಉಪಾಧ್ಯಾಯ, ಮಂಜಾದ್ರಿ ಗೌಡ, ಎಚ್.ವೈ.ಸತೀಶ್, ದಾವೂದ್ ಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net