ಆಟೋಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ | police deapartment

ಆಟೋ ರೀಕ್ಷಾಗಳಿಗೆ ವಿಶಿಷ್ಟ ಸಂಖ್ಯೆಯ ಸ್ಟಿಕರ್‌ಗಳನ್ನು ಡಿವೈಎಸ್ಪಿ ಪ್ರಕಾಶ್ ರಾಠೋಡ್ ಲಗತ್ತಿಸುತ್ತಿರುವುದು.
ಆಟೋ ರೀಕ್ಷಾಗಳಿಗೆ ವಿಶಿಷ್ಟ ಸಂಖ್ಯೆಯ ಸ್ಟಿಕರ್‌ಗಳನ್ನು ಡಿವೈಎಸ್ಪಿ ಪ್ರಕಾಶ್ ರಾಠೋಡ್ ಲಗತ್ತಿಸುತ್ತಿರುವುದು.
Published on
ಭದ್ರಾವತಿ: ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ದಾಖಲೆಗಳನ್ನು ಪರಿಶೀಲಿಸಿ ಅವುಗಳಿಗೆ ವಿಶಿಷ್ಟ ಸಂಖ್ಯೆ ನೀಡುವ ಅಭಿಯಾನವನ್ನು ಬುಧವಾರ ಪೊಲೀಸ್ ಇಲಾಖೆ ಆರಂಭಿಸಿತು.
ಆಟೋ ರಿಕ್ಷಾಗಳಿಗೆ ಸಂಬಂಧಿಸಿದ ವಾಹನ ವಿಮೆ, ವಾಹನದ ನೋಂದಣಿ ಪತ್ರ, ಚಾಲನಾ ಪರವಾನಗಿ, ಹೊಗೆ ತಪಾಸಣೆ ಮೊದಲಾದ ದಾಖಲೆಗಳನ್ನು ಪೊಲೀಸ್ ಇಲಾಖೆ ಪರಿಶೀಲಿಸಿ, ಸಮರ್ಪಕವಾಗಿದ್ದರೆ ಅಂತಹ ವಾಹನಕ್ಕೆ ‘ಬಿಡಿವಿಟಿ’ ಎಂಬ ಅಕ್ಷರಗಳಿಂದ ಆರಂಭವಾಗುವ ವಿಶಿಷ್ಟ ಸಂಖ್ಯೆಯ ಸ್ಟಿಕರ್ ಅಂಟಿಸಿದರು.
ಆಟೋ ರಿಕ್ಷಾಗಳಿಗೆ ವಿಶಿಷ್ಟ ಸಂಖ್ಯೆಯ ಸ್ಟಿಕರ್ ವಿತರಿಸಿ ಮಾತನಾಡಿದ ಎಎಸ್ಪಿ ಎ.ಜಿ.ಕಾರಿಯಪ್ಪ, ವಿಶಿಷ್ಟ ಸಂಖ್ಯೆ ಇರುವ ಆಟೋ ರಿಕ್ಷಾದ ಸಮಗ್ರ ಮಾಹಿತಿ ಪೊಲೀಸ್ ಇಲಾಖೆ ಬಳಿ ಇರುತ್ತದೆ. ಇದರಿಂದ ಆಟೋ ರಿಕ್ಷಾ ಪ್ರಯಾಣದ ವೇಳೆ ನಡೆಯಬಹುದಾದ ಸಂಭಾವ್ಯ ಅಪರಾಧಗಳಿಗೆ ಹಾಗೂ ಕಾನೂನು ಉಲ್ಲಂಘನೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಆಟೋ ರಿಕ್ಷಾ ಮಾಲೀಕರು ತಮ್ಮ ಹೆಸರು, ವಿಳಾಸ ಹಾಗೂ ವಾಹನದ ನೋಂದಣಿ ಸಂಖ್ಯೆ ಮೊದಲಾದ ಮಾಹಿತಿಯನ್ನು ವಾಹನದಲ್ಲಿ ಕುಳಿತ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. 
ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾತನಾಡಿ, ಭದ್ರಾವತಿ ನಗರದಲ್ಲಿ ಸುಮಾರು 700 ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ಮೊದಲ ಹಂತದಲ್ಲಿ 80 ಆಟೋ ರಿಕ್ಷಾಗಳಿಗೆ ವಿಶಿಷ್ಟ ಸಂಖ್ಯೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷೆ ಈ ಅಭಿಯಾನದ ಮುಖ್ಯ ಉದ್ದೇಶ ಎಂದರು. ವಿವಿಧ ಪೊಲೀಸ ಠಾಣೆಯ ಇನ್ಸ್‌ಪೆಕ್ಟರ್‌ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net